ನಮ್ಮ ಶಾಲೆ ಮತ್ತು ಶಾಲೆಯ ಬ್ಲಾಗ್ ಬಗ್ಗೆ ನಿಮ್ಮ ಸಲಹೆ-ಸೂಚನೆ, ಅಭಿಪ್ರಾಯ ತಿಳಿಯಲು ಕಾತರರಾಗಿದ್ದೇವೆ. ನಮ್ಮ ಶಾಲೆಯ ಇ-ಮೇಲ್ ವಿಳಾಸ : ccakpschool@gmail.com
ನಮ್ಮ ಶಾಲೆಯ Facebook I.D :

Saturday, 13 July 2013

ಈ ಶತಮಾನದ ಚಾಣಕ್ಯ ಶ್ರೀ ಎನ್.ಎಂ.ಬಿರಾದಾರ

ಪ್ರಿಯ ಓದುಗ ಸ್ನೇಹಿತರೆ,
     ನಮ್ಮ ಸುತ್ತ ಮುತ್ತ ಹಲವಾರು ಸಾಧಕರು ಸದ್ದಿಲ್ಲದೆ ದುಡಿಯುತ್ತಿದ್ದಾರೆ. ಅವರಲ್ಲಿ ಹಲವರು ಬೆಳಕಿಗೆ ಬರುತ್ತಾರೆ. ಕೆಲವರು ಎಲೆ ಮರೆಯ ಕಾಯಿಯಂತೆ ಬದುಕುತ್ತಿರುತ್ತಾರೆ. ಆದರೆ ಅಂಥವರ ಸಾಧನೆಗಳ ಪರಿಮಳ ಎಲ್ಲೆಡೆ ಪಸರಿಸಿರುತ್ತದೆ. once again ಯಾವ ಪ್ರಚಾರದ ಆಸೆಯೂ ಇಲ್ಲದೆ ಸದ್ದಿಲ್ಲದೆ ದುಡಿಯುತ್ತಾ ನಾಡಿನೆಲ್ಲೆಡೆ ಕಂಪು ಬೀರುತ್ತಿರುವ ಅಂಥ ಒಬ್ಬ ಸಾಧಕರ ಕಥೆಯನ್ನು ತಿಳಿಯುವುದಕ್ಕಿಂತ ಮುಂಚೆ ಅವರ ಸಾಧನೆಗಳ ಕಿರು ನೋಟ ಇಲ್ಲಿದೆ.

              ಅವರ ಹೆಸರು ನಿಂಗನಗೌಡ ಎಮ್. ಬಿರಾದಾರ. ಇವರ ಹೆಸರನ್ನು ಕೇಳದ ಸ್ಪರ್ಧಾರ್ಥಿಗಳೇ ನಮ್ಮ ನಾಡಿನಲ್ಲಿ ಯಾರೂ ಇಲ್ಲ ಎಂದರೆ ಅತಿಶಯೋಕ್ತಿಯಾಗಲಾರದು. ಆದರೆ, ಬಹುತೇಕರಿಗೆ ಇವರ ಜೀವನದ ಹಿನ್ನೆಲೆ, ಬಾಲ್ಯ, ಬೆಳೆದು ಬಂದ ರೀತಿ ಗೊತ್ತಿರಲಿಕ್ಕಿಲ್ಲ. ಇವರು ಸ್ಥಾಪಿಸಿದ ನಾಡಿನ ಹೆಸರಾಂತ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರವಾದ `ಚಾಣಕ್ಯ ಕರಿಯರ್ ಅಕಾಡೆಮಿ'ಯಲ್ಲಿ ಸುಮಾರು ಒಂದು ಲಕ್ಷಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ಕಲಿತು ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. "ಇಲ್ಲಿ ಕಲಿತವರು ಸರ್ಕಾರಿ ಹುದ್ದೆಯನ್ನು ಖಂಡಿತ ಪಡೆಯುತ್ತಾರೆ" ಎಂಬ ಮಾತು ಸ್ಪರ್ಧಾತ್ಮಕ ವಲಯದಲ್ಲಿ ಜನಜನಿತವಾಗಿದೆ.

                      ಡಿ.ಇಡಿ., ಬಿ.ಇಡಿ., ಎಸ್.ಡಿ.ಸಿ., ಎಫ್.ಡಿ.ಸಿ., ಪೋಲೀಸ್ ಪೇದೆ ನೇಮಕಾತಿ, ಪಿ.ಎಸ್.ಐ., ಪಿ.ಡಿ.ಓ., ಹಾಸ್ಟೆಲ್ ವಾರ್ಡನ್, ಕೆ.ಎ.ಎಸ್., ಐ.ಎ.ಎಸ್. ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಇಲ್ಲಿ ತರಬೇತಿ ಕೊಡಲಾಗುತ್ತದೆ. ತರಬೇತಿ ಪಡೆದವರಾರು ನಿರುದ್ಯೋಗಿಗಳಾಗಿ ಉಳಿದಿಲ್ಲ. ಪ್ರಾಮಾಣಿಕವಾಗಿ ಓದಿದಾಗಲೂ ಸರ್ಕಾರಿ ನೌಕರಿ ಪಡೆಯಲಿಕ್ಕಾಗದ ಅಭ್ಯರ್ಥಿಗಳಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು, ಇತರ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಕರಾಗಿ ನೇಮಿಸುವ ಜವಾಬ್ದಾರಿಯನ್ನು ಎನ್.ಎಂ.ಬಿರಾದಾರ್ ಅವರು ಹೊತ್ತಿದ್ದಾರೆ. ಇಲ್ಲಿ ಕಲಿಯುವ ಪ್ರತಿಯೊಬ್ಬ ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳೆಂದೇ ಪರಿಗಣಿಸುವ ಇವರು ತೀರಾ ಬಡತನದ ಪ್ರತಿಭಾವಂತ ಮಕ್ಕಳನ್ನು ತಮ್ಮ ಬಳಿಯೇ ಇಟ್ಟುಕೊಂಡು ಊಟ, ವಸತಿ ಕೊಟ್ಟು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಣಿಗೊಳಿಸುತ್ತಿದ್ದಾರೆ.

          ಚಾಣಕ್ಯ ಕರಿಯರ್ ಅಕಾಡೆಮಿಯಲ್ಲಿ ಬೋಧಿಸುತ್ತಿರುವ ಉಪನ್ಯಾಸಕರು ತಮ್ಮ ದಿನದ ೨೪ಗಂಟೆಗಳನ್ನು ಸಿ.ಇ.ಟಿ. ತರಗತಿಗಳಿಗಾಗಿಯೇ ಮೀಸಲಿಟ್ಟಿದ್ದಾರೆ. ಬೆಳಿಗ್ಗೆ ೬ ಗಂಟೆಗೆಲ್ಲಾ ಆರಂಭವಾಗುವ ತರಗತಿಗಳು ರಾತ್ರಿ ಒಂಭತ್ತು ಹತ್ತು ಗಂಟೆಯವರೆಗೆ ಮುಂದುವರೆದಿರುತ್ತವೆ. ಒಮ್ಮೊಮ್ಮೆ ನಸುಕಿನ ಜಾವ ನಾಲ್ಕು ಗಂಟೆಗಳವರೆಗೆ ತರಗತಿಗಳನ್ನು ನಡೆಸುವುದುಂಟು..! ಪ್ರತಿ ದಿನ ನಸುಕಿನ ಜಾವ ೫ ಗಂಟೆಗೆ ಯೋಗಾಸನವನ್ನು ಹೇಳಿ ಕೊಡಲಾಗುತ್ತದೆ. ನಂತರ ಆಯಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಪಟ್ಟ ಕ್ಲಾಸುಗಳು ಆರಂಭವಾಗುತ್ತವೆ.

         ಕಳೆದ ವರ್ಷವಷ್ಟೆ ದಶಮಾನೋತ್ಸವವನ್ನು ಯಶಸ್ವಿಯಾಗಿ ಪೂರೈಸಿಕೊಂಡಿರುವ ಚಾಣಕ್ಯ ಕರಿಯರ್ ಅಕಾಡೆಮಿಯು ನೊಂದವರ ಬಾಳಿಗೆ ಆಶಾಕಿರಣವಾಗಿ, ಸರ್ಕಾರಿ ಹುದ್ದೆಯ ಆಸೆ ಹೊತ್ತು ಬರುವವರಿಗೆ ನೆರಳಾಗಿ, ಮಾರ್ಗದರ್ಶಿಯಾಗಿ, ವಿದ್ಯಾಕೇಂದ್ರವಾಗಿ ಇಂದು ಹೆಮ್ಮರವಾಗಿ ಬೆಳಿದಿದೆ.

              ಪ್ರತಿದಿನ ೭-೮ ಬ್ಯಾಚುಗಳು ನಡೆಯುತ್ತವೆ. ಪ್ರತಿ ಬ್ಯಾಚಿನಲ್ಲಿಯೂ ಕನಿಷ್ಟ ೨೫೦ ಜನ ವಿದ್ಯಾರ್ಥಿಗಳಿರುತ್ತಾರೆ. ಆದಾಗ್ಯೂ ಎಲ್ಲರಿಗೂ ತಿಳಿಯುವಂತೆ ಸವಿವರವಾಗಿ ಹೇಳುವುದು ಇಲ್ಲಿನ ವಿಶೇಷ. ಪತಿವರ್ಷ ಏನಿಲ್ಲವೆಂದರೂ ಹತ್ತುಸಾವಿರಕ್ಕಿಂತಲು ಹೆಚ್ಚು ವಿದ್ಯಾರ್ಥಿಗಳು ಇಲ್ಲಿ ತರಬೇತಿ ಪಡೆದು ಹೊರಬರುತ್ತಾರೆ.

                  ಪ್ರತಿವರ್ಷ ಇಲ್ಲಿ ಪ್ರವೇಶಕ್ಕಾಗಿ ವಿದ್ಯಾರ್ಥಿಗಳ ನೂಕುನುಗ್ಗಲು ಉಂಟಾಗುವುದು ಸಾಮಾನ್ಯವಾಗಿದೆ. "ಹಳೆಯ ವಿದ್ಯಾರ್ಥಿಗಳ ಅನುಭವ ಕೇಳಿ ಪ್ರವೇಶ ಪಡೆಯಿರಿ" ಎಂಬುದು ಈ ಸಂಸ್ಥೆಯ ಅಘೋಷಿತ ಸ್ಲೋಗನ್. ಇಷ್ಟೆಲ್ಲಾ ವಿಶೇಷತೆಗಳನ್ನು ಹೊಂದಿರುವ ಈ ಶಿಕ್ಷಣ ಸಂಸ್ಥೆಯ ಹಿಂದಿರುವ ದೈತ್ಯ ಶಕ್ತಿಯೇ ಶ್ರೀ ಎನ್.ಎಂ.ಬಿರಾದಾರ. ಬನ್ನಿ ಅವರ ಮಾತಿನಲ್ಲೇ ಅವರ ಕಥೆ ಕೇಳೋಣ.

                                           *          *           *             *               *

                           ಬಾಳು ಅರಳಿಸಿದ ಕಲೆಗಾರರು

                                                           - ನಿಂಗನಗೌಡ ಮಡಿವಾಳಪ್ಪಗೌಡ ಬಿರಾದಾರ

                                        ಬದುಕು ಜಟಕಾ ಬಂಡಿ, ವಿಧಿಯದರ ಸಾಹೇಬ
                                        ಕುದುರೇ ನೀನ್, ಅವನು ಪೇಳ್ದಂತೆ ಪಯಣಿಗರು
                                        ಮದುವೆಗೋ ಮಸಣಕೋ ಹೋಗೆಂದ ಕಡೆಗೋಡು
                                        ಪದಕುಸಿಯೆ ನೆಲವಿಹುದು- ಮಂಕುತಿಮ್ಮ.

        ಡಿ.ವಿ.ಜಿ.ಯವರ ಅನುಭವದ ಮಾತು ಸಾರ್ವಕಾಲಿಕ ಸತ್ಯವಾದ ಮಾತು. ಇಂದಿನ ಸಂಸ್ಕಾರ ರಹಿತವಾಗಿ ಬೆಳೆಯುತ್ತಿರುವ ದಿನಮಾನಗಳಲ್ಲಿ ನಿಜಕ್ಕೂ ಬದುಕು ಜಟಕಾ ಬಂಡಿಯೇ ಸರಿ. ಏಕೆಂದರೆ ಬದುಕಿನಲ್ಲಿ ಬರುವ ಅನೇಕ ರೀತಿಯ ಕಷ್ಟ, ನೋವುಗಳನ್ನು ಸಹಿಸಿ ಬಾಳುವ ತಾಳ್ಮೆಯ ಜಟಕಾಬಂಡಿ ಮಾನವನಾದರೆ, ಅವನ ಸಹನೆ ತಾಳ್ಮೆಯನ್ನು ಪರೀಕ್ಷಿಸಲು ವಿಧಿ ಎಂಬುದು ಬೆನ್ನಟ್ಟಿ ಅನೇಕ ರೀತಿಯಾಗಿ ಕಾಡಿದಾಗ, ಮದುವೆ ಎಂಬ ಸಂಭ್ರಮದ ಕಡೆಗೆ ಕರೆದುಕೊಂಡು ಹೋಗುವುದೋ ಅಥವಾ ಮಸಣ ಕಡೆಗೆ ಕರೆದುಕೊಂಡು ಹೋಗುವುದೋ ಗೊತ್ತಿಲ್ಲವಾದರೂ ಅದನ್ನೆಲ್ಲ ಸಹಿಸಿ ಎಷ್ಟೇ ಕಷ್ಟ ಬಂದರೂ ಕೊನೆಗೆ "ನೆಲವಾದರೂ ನನ್ನ ರಕ್ಷಣೆಗಿದೆಯಲ್ಲಾ, ಅದು ನನ್ನ ಕಾಪಾಡುತ್ತದೆ" ಎಂಬ ತಾತ್ವಿಕ ಧೈರ್ಯದ ಮಾತು ಅನೇಕ ನೊಂದ ಬೆಂದವರ ಬಾಳಿಗೆ ಬೆಳಕಾಗಿ, ಬದುಕಿನಲ್ಲಿ ಹತಾಶೆಗೊಂಡವರ ಬಾಳಿಗೆ ಅರ್ಥ ತುಂಬಿದೆ.

   ಮಹಾನುಭಾವ ಡಿ.ವಿ.ಜಿ.ಯವರು ಹೇಳಿದ ತತ್ವಭರಿತವಾದ ಈ ನಾಲ್ಕು ಸಾಲುಗಳ ಅರ್ಥವನ್ನು ಪರಿಪೂರ್ಣವಾಗಿ ಬಿಂಬಿಸುವ ವ್ಯಕ್ತಿತ್ವವನ್ನು ಹೊಂದಿ, ವಿಧಿ ಎಷ್ಟೇ ಕಾಡಿ ಪರೀಕ್ಷಿಸಿದರೂ, ವಿಧಿಯ ಪರೀಕ್ಷೆಯಲ್ಲಿ "ನಾ ಸೋತರು ನಾ ನಂಬಿದ ಭೂಮಿ ನನ್ನನ್ನು ಕೈ ಬಿಡುವದಿಲ್ಲ" ಎಂಬ ಧೈರ್ಯದಿಂದ ಬದುಕು ಸಾಗಿಸಿ ಕತ್ತಲೆಯಲ್ಲಿದ್ದರೂ ಬೆಳುಕು ಕಾಣುವವರೆಗೆ ಇಟ್ಟ ದಿಟ್ಟ ಹೆಜ್ಜೆಯನ್ನು ಹಿಂದೆ ತೆಗೆಯದೆ, ಧೈರ್ಯದಿಂದ ಬದುಕಿ ಅಂಥ ಬದುಕಿನಲ್ಲಿ ಮೂರು ಮಕ್ಕಳನ್ನು ಶಿಕ್ಷಣ ಕ್ಷೇತ್ರದಲ್ಲಿ ತುಂಬಾ ಎತ್ತರಕ್ಕೆ ತಂದು ವಿಜಾಪುರ ಜಿಲ್ಲೆಯ ಹೆಸರಿನ ಕೀರ್ತಿಯನ್ನು ಎತ್ತಿಹಿಡಿಯುವಂತಹ ಮಕ್ಕಳನ್ನು ಹೆತ್ತು, ಅವರ ಛಲಬಿಡದ ಸಾಧನೆಯಲ್ಲಿ ಬದುಕನ್ನು ಸಾರ್ಥಕಗೊಳಿಸಿಕೊಂಡು ಮಡಿವಂತಿಕೆಯಿಂದಲೇ ಜೀವನವನ್ನು ಗೆದ್ದ ಮಡಿವಾಳಪ್ಪಗೌಡರ ಬದುಕಿನ ಸಾರ್ಥಕತೆಯ ಸತ್ಯಸಂಗತಿಯನ್ನು ಪರಿಚಯಿಸಲು ಡಿ.ವಿ.ಜಿ.ಯವರ ಮಾತು ಸೂಕ್ತವೆನಿಸುತ್ತದೆ.

        ವಿಜಾಪುರ ಜಿಲ್ಲೆ ಮಹಾತ್ಮ ಬಸವಣ್ಣನವರಿಗೆ ಜನ್ಮ ನೀಡಿದ ಪುಣ್ಯ ಭೂಮಿ. ಈ ಜಿಲ್ಲೆ ಅನೇಕ ಜನ ಶರಣರಿಗೆ, ಶಿವಯೋಗಿಗಳಿಗೆ, ಕವಿಗಳಿಗೆ ಜನ್ಮವಿತ್ತ, ಪಾವನ ನೆಲವೂ ಆಗಿದೆ. ಇದೇ ಜಿಲ್ಲೆಯ ಸಿಂದಗಿ ತಾಲೂಕಿನ `ತಿಳಗುಳ' ಎಂಬ ಚಿಕ್ಕ ಹಳ್ಳಿಯೊಂದರಲ್ಲಿ ಕಡುಬಡತನದಲ್ಲಿ ನೊಂದು ಬೆಂದರೂ ಹಿರಿಯರ ಮಾತನ್ನು ಪಾಲಿಸಿ ಗ್ರಾಮದ ಗುರುಹಿರಿಯರಿಗೆ ತುಂಬಾ ಪ್ರೀತಿ ಪಾತ್ರರಾಗಿ ಮೂರು ಮಕ್ಕಳೊಂದಿಗೆ, ಹಿರಿಜೀವ ತಾಯಿಯೊಂದಿಗೆ ಕಷ್ಟದ ಬದುಕು ತಮ್ಮದಾದರು ಮತ್ತೊಬ್ಬರಿಗೆ ಕೈ ಚಾಚದೆ, ಇದ್ದುದ್ದನು ತಿಂದು ಇಲ್ಲದಿದ್ದರೆ ಸುಮ್ಮನಾಗಿ ಬದುಕನ್ನು ಗೆದ್ದ ಮಡಿವಾಳಪ್ಪಗೌಡರು ಜೀವನದಲ್ಲಿ ಸೋತವರಿಗೆ ಎಂದಾದರೂ ಒಂದು ದಿನ ಗೆಲುವು ಸಿಕ್ಕೇ ಸಿಗುತ್ತದೆಂದು ತೋರಿಸಿಕೊಟ್ಟವರು.


         ಹರ ತನ್ನ ಭಕ್ತರ ತಿರಿವಂತೆ ಮಾಡುವ
         ಒರೆದು ನೋಡುವ ಚಿನ್ನದಂತೆ
         ಅರೆದು ನೋಡುವ ಚಂದನದಂತೆ
        ಹಿಂಡಿ ನೋಡುವ ಕಬ್ಬಿನಂತೆ
        ಬೆದರದೆ ಬೆಚ್ಚದೆ ಇದ್ದರೆ ಕರವಿಡಿದೆತ್ತಿಕೊಂಬ
         ನಮ್ಮ ರಾಮನಾಥ.
ಎಂಬ ವೈಚಾರಿಕ ಹಿನ್ನೆಲೆಯನ್ನು ಹೊತ್ತ ಮಾತಿನಂತೆ, ಮಡಿವಾಳಪ್ಪ ಗೌಡರು ಜೀವನದ ಕಷ್ಟಗಳನ್ನು ಸಮನಾಗಿ ಸ್ವೀಕರಿಸಿದರೂ, ಕಷ್ಟಗಳನ್ನು ಹಾಸಿ, ಕಷ್ಟಗಳನು ಹೊದ್ದು, ಕೊನೆಗೊಮ್ಮೆ ಆತ್ಮಹತ್ಯೆ ಮಾಡಿಕೊಳ್ಳಬೇಕೆನ್ನುವವರೆಗೆ ಹೋಗಿದ್ದ ವ್ಯಕ್ತಿಯೇ ಇಂದು ಮೂರು ಮಕ್ಕಳ ಸಾಧನೆಯನ್ನು ಕಂಡು "ನಾ ಅಂದು ಎಷ್ಟೇ ಕಷ್ಟಪಟ್ಟರೂ ನನ್ನ ಮಕ್ಕಳ ವಿದ್ಯಾಭ್ಯಾಸಕ್ಕೆ ಕೊರತೆ ಮಾಡದೆ ಇದ್ದುದರ ಫಲವಾಗಿ ಮಕ್ಕಳು ಚಾಣಕ್ಯ ನೀತಿಯನ್ನು ಅರಿತು ಚಾಣಕ್ಯ ಕರಿಯರ್ ಅಕಾಡೆಮಿ ಮೂಲಕ ರಾಜ್ಯದಲ್ಲಿ ಹೆಸರಾಗುವಂತೆ ಮಾಡಿದರು" ಎಂದುಕೊಂಡಿದ್ದಾರೆ. ಇದು ಶರಣರ ಮೇಲಿನ ವಚನಕ್ಕೆ ಸಾಕ್ಷಿಯಾದ ಬದುಕು.

             ವಿಜಾಪುರ ಜಿಲ್ಲೆ ಸಿಂದಗಿ ತಾಲೂಕಿನ ತಿಳಗುಳದ ಕಡುಬಡತನದಲ್ಲಿ ಬದುಕುತ್ತಿರುವ ಕುಟುಂಬ ನಿಂಗಣಗೌಡ ಮತ್ತು ಪತ್ನಿ ಮಲ್ಲಮ್ಮನವರದ್ದಾಗಿತ್ತು. ಕುಟುಂಬದಲ್ಲಿ ತುಂಬಾ ಬಡತನವಿದ್ದರೂ ನಿಂಗಣ ಗೌಡ ದಂಪತಿಗಳ ಉದಾರತೆಗೆ, ಪ್ರೀತಿಗೆ, ಒಳ್ಳೆಯ ವಿಚಾರಗಳಿಗೆ, ಪ್ರಾಮಾಣಿಕತೆಗೆ ಕೊರತೆ ಇರಲಿಲ್ಲ. ಹಾಸಿಗೆ ಇದ್ದಷ್ಟು ಕಾಲುಚಾಚು ಎಂಬಂತೆ 9 ಎಕರೆ ಜಮೀನಿದ್ದರೂ ಅದರಲ್ಲಿ ಬೆಳೆದು ಬಂದುದರಲ್ಲೆ ಜೀವನ ಸಾಗಿಸಿ, ಎರಡು ಮಕ್ಕಳನ್ನು ಪಡೆದರು. ಅವರ ಪುಣ್ಯದ ಫಲವಾಗಿ ಹುಟ್ಟಿದವರೇ ಮಡಿವಾಳಪ್ಪಗೌಡರು.

 ಮಡಿವಾಳಪ್ಪ ಗೌಡರ ಬಾಲ್ಯ ಮತ್ತು ವಿದ್ಯಾಭ್ಯಾಸ

          ತಿಳಗುಳದ ನಿಂಗಣಗೌಡ, ಪತ್ನಿ ಮಲ್ಲಮ್ಮರ ಸಂಸಾರ ಚಿಕ್ಕದಾಗಿದ್ದು ಚೊಕ್ಕದಾಗಿತ್ತು. ಒಕ್ಕಲುತನವನ್ನೇ ನಂಬಿ ನಡೆದ ದಂಪತಿಗಳು ನಿಂಗಣಗೌಡ ದಂಪತಿಗಳು. ಹಿರಿಯರ 9 ಎಕರೆ ಒಣಬೇಸಾಯದ ಹೊಲದಲ್ಲಿಯೇ ದುಡಿದು ತಾವಾಯಿತು, ತಮ್ಮ ಬದುಕಾಯಿತೆಂದು ಮತ್ತೊಬ್ಬರ ವಿಷಯಕ್ಕೆ ಹೋಗದೆ ಗ್ರಾಮದ ಗುರು-ಹಿರಿಯರ ಪ್ರೀತಿಗೆ ಪಾತ್ರರಾಗಿ ಬದುಕುತ್ತಿದ್ದ ಪುಣ್ಯ ದಂಪತಿಗಳ ಉದರದಲ್ಲಿ 1938ರಲ್ಲಿ ಚೊಚ್ಚಲ ಮಗನಾಗಿ ಹುಟ್ಟಿದವರೆ ಮಡಿವಾಳಪ್ಪಗೌಡರು. ಇವರ ಜೊತೆಗೆ ಹುಟ್ಟಿದ ಹೆಣ್ಣುಮಗಳೇ ಬೋರಮ್ಮ. ಇವರು ಬಹಳ ಬೇಗನೆ ಗಂಡನ ಮನೆ ಸೇರಿದರು. ನಿಂಗಣಗೌಡರು ತಮ್ಮ ತಂದೆಯವರಿಗೆ ಏಕೈಕ ವಂಶದ ಕುಡಿಯಾಗಿ ಹುಟ್ಟಿಬಂದಿದ್ದರು. ಅವರ ಹೊಟ್ಟೆಯಲ್ಲಿ ಹುಟ್ಟಿದ ಮಡಿವಾಳಪ್ಪ ಗೌಡರು ಏಕೈಕ ವಂಶದ ಕುಡಿಯಾಗಿ ಹುಟ್ಟಿರುವುದರಿಂದ ನಿಂಗಣಗೌಡರಿಗೆ ಮಗ ಮಡಿವಾಳಪ್ಪ ಗೌಡರ ಮೇಲೆ ತುಂಬಾ ಪ್ರೀತಿ. ತಾಯಿಯೂ ಸಹ, ಬಡತನವಿದ್ದರೂ ಮಗನಿಗೆ ಯಾವುದೇ ರೀತಿಯ ಕೊರತೆಯಾಗದಂತೆ ಬೆಳೆಸಿದರು. ಹಾಗೂ ಚೆನ್ನಾಗಿ ಓದಿಸಿದರು. ಅದಕ್ಕೆ ತಕ್ಕಂತೆ ಮಡಿವಾಳಪ್ಪ ಗೌಡರು ಆಸಕ್ತಿಯಿಂದ, ಶ್ರದ್ಧೆಯಿಂದ ಓದಿ ಆಗಿನ ಮುಲ್ಕಿ ಪರೀಕ್ಷೆಯಲ್ಲಿ 7ನೇ ವರ್ಗದ ಪ್ರಥಮ ಶ್ರೇಣಿಯಲ್ಲಿ ಪಾಸಾದರು. ನಂತರ ಮುಂದೆ ಓದಿಸಲು ಸಾಧ್ಯವಾಗದ ಕಾರಣ ಬದುಕಿಗೆ ಆಸರೆಯಾಗುವ ಯಾವುದಾದರೊಂದು ಕೋರ್ಸ್‍ನ್ನು ಮಾಡಬೇಕೆಂದು ವಿಚಾರಿಸಿ, ಮಡಿವಾಳಪ್ಪ ಗೌಡರು ಈಗಿನ ಬಾಗಲಕೋಟೆ ಜಿಲ್ಲೆಯ ಹಾವೇರಿಯಲ್ಲಿ ಕೃಷಿಗೆ ಸಂಬಂಧಿಸಿದ `ಅಗ್ರಿಕಲ್ಚರ್ ಕೋರ್ಸ್' ಮತ್ತು ತಲಾಟಿ ಹುದ್ದೆಗೆ ಸಂಬಂಧಿಸಿದ ತರಬೇತಿ ಪಡೆದರು. 1954ರಿಂದ 1956ರವರೆಗೆ ಎರಡು ವರ್ಷದ ತರಬೇತಿಯಲ್ಲಿ ಪ್ರಥಮ ರ್‍ಯಾ0ಕಿನಲ್ಲಿ ಪಾಸಾದರು.

 ಆಗಿನ ಮುಲ್ಕಿ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ಪಾಸಾಗಿ ಎರಡು ತರಬೇತಿ ಕೋರ್ಸುಗಳಲ್ಲಿ ರ್‍ಯಾಂಕ್ ಪಡೆದರೂ ಮಡಿವಾಳಪ್ಪ ಗೌಡರ ಸಮಯ, ದೈವಗಳೆರಡು ಕೈ ಜೋಡಿಸದ ಕಾರಣವಾಗಿ ಯಾವುದೇ ರೀತಿಯ ಸರ್ಕಾರಿ ನೌಕರಿ ಸಿಗಲೇ ಇಲ್ಲ. ದೇವರು ಇದ್ದವರಿಗೆನೇ ಕೊಡುತ್ತಾನೆ. ಇಲ್ಲದವರ ಕಡೆಗೆ ನೋಡುವುದಿಲ್ಲವೆಂದು ತಿಳಿದು ಗಟ್ಟಿ ಮನಸ್ಸು ಮಾಡಿ ಮಡಿವಾಳಪ್ಪ ಗೌಡರ ತಂದೆ ತಾಯಿಗಳು "ಜನ ನಮ್ಮನ್ನು ಬಿಟ್ಟಾರೂ ನಾವು ನಂಬಿದ ಭೂಮಿತಾಯಿ ನಮ್ಮನ್ನೆಂದು ಕೈ ಬಿಡುವುದಿಲ್ಲ. ದುಡಿದುಣ್ಣುವುದರಿಂದಲೇ ನಮ್ಮ ಬದುಕು ಹಸನಾಗುವುದೆಂದು ನಮ್ಮ ಹಣೆಬರಹದಲ್ಲಿದ್ದರೆ ಯಾರೇನು ಮಾಡುವುದು, ನಮ್ಮ ದುಡಿಯುವ ಕೈಗಳಿಗೆ ಶಕ್ತಿ ಕೊಡು ಭಗವಂತ" ಎಂದು. ದುಡಿದು ಗಟ್ಟಿಯಾಗಿ ಬದುಕಿ ತೋರಿಸು ಎಂದು ಮಡಿವಾಳಪ್ಪ ಗೌಡರಿಗೆ ಧೈರ್ಯ ತುಂಬಿದರು. ಅಷ್ಟೊತ್ತಿಗೆ ಮದುವೆ ವಯಸ್ಸಿಗೆ ಬಂದ ಮಡಿವಾಳಪ್ಪಗೌಡರಿಗೆ ತಂದೆ ನಿಂಗಣಗೌಡರು ಬ್ಯಾಕೋಡದ ಶಂಕರಮ್ಮ ಎಂಬ ಕನ್ಯೆಯನ್ನು ತಂದು ಮದುವೆ ಮಾಡಿದರು. ಸಂಸಾರದಲ್ಲಿದ್ದು ಬದುಕುವ ಬದುಕಿಗೆ ಅರ್ಥವಿದೆ. `ಪ್ರಪಂಚ ಗೆದ್ದು ಪಾರಮಾರ್ಥ ಗೆದೆಯಬೇಕು' ಎಂಬ ಮಾತಿನಂತೆ ಒಂದು ಬಂಡಿಯ ಎರಡು ಗಾಲಿಗಳಾಗಿ ಸತಿಪತಿಗಳೊಂದಾದ ಭಕ್ತಿ ಹಿತವಪ್ಪುದು ಶಿವಂಗೆ, ಸತಿಪತಿಗಳೊಂದಾಗದ ಭಕ್ತಿ ಅಮೃತದೊಳಗೆ ವಿಷವ ಬೆರೆಸಿದಂತೆ' ಎಂಬ ಮಾತನ್ನು ನೆನಪಿನಲ್ಲಿಟ್ಟು ಬದುಕು ಎಂದು ಹಾರೈಸಿ ಕೆಲದಿನ ಮಗನ ಜೊತೆಗಿದ್ದು ಪತ್ನಿಯ ಜೊತೆ ಮಗನಿಗೆ ಸದಾ ತಿಳುವಳಿಕೆ ನೀಡುತ್ತಾ ಬಂದರು. ನಿಂಗಣಗೌಡರು ಮಡಿವಾಳಪ್ಪಗೌಡರು 29 ವರ್ಷದವನಿದ್ದಾಗ ತಮ್ಮ ತಂದೆಯವರನ್ನು ಕಳೆದುಕೊಂಡರು.

ಮಡಿವಾಳಪ್ಪ ಗೌಡರ ತಂದೆ ತೀರಿದ ನಂತರ, ಸಂಸಾರ ಹೊತ್ತು ಸಾಗಿದ್ದು,

ಬೆಟ್ಟದ ಮೇಲೊಂದು ಮನೆಯನು ಮಾಡಿ
ಮೃಗಗಳಿಗೆ ಅಂಜಿದೊಡೆಂತಯ್ಯ
ಸಮುದ್ರದಾ ತಟದಲ್ಲೊಂದು ಮನೆಯ ಮಾಡಿ
ನೆರೆತೊರೆಗಳಿಗಂಜಿದೊಡೆಂತಯ್ಯ
ಸಂತೆಯಲೊಂದು ಮನೆಯ ಮಾಡಿ
ಶಬ್ದಕ್ಕೆ ನಾಚಿದೊಡೆಂತಯ್ಯ
ಲೋಕದಲಿ ಹುಟ್ಟಿರ್ದ ಬಳಿಕೆ ಸ್ತುತಿನಿಂದನೆಗಳು ಬಂದರೆ
 ಮನದಲಿ ಕೋಪವಾ ತಾಳದೆ ಸಮಾಧಾನಿಯಾಗಿರಬೇಕು.
   ಎಂಬ ಅಕ್ಕ ಮಹಾದೇವಿಯ ಮಾತು. ಜೀವನದಲ್ಲಿ ಎಂತಹ ತೊಂದರೆ, ನಿಂದೆಗಳು ಬಂದರೂ ಸಮಾಧಾನದಿಂದಲೇ ಅವುಗಳನ್ನು ಎದುರಿಸಿದರೆ, ಒಂದಲ್ಲ ಒಂದು ದಿನ ಬದುಕಿನಲ್ಲಿ ಜಯಸಾಧಿಸುತ್ತೇವೆ ಎಂಬ ಮಾತನ್ನು ಆಳವಾಗಿ ನಂಬಿದ ಮಡಿವಾಳಪ್ಪಗೌಡರು ತಂದೆ ತೀರಿದ ನಂತರ ಚಿಕ್ಕದಾದ ಒಂದು ಕೊಟ್ಟಿಗೆಯಲ್ಲಿ ಪ್ರೀತಿಯ ತಾಯಿ ಮಲ್ಲಮ್ಮ, ಪತ್ನಿ ಶಂಕರಮ್ಮರ ಜೊತೆ ಏಳುತ ಬೀಳುತ ಬದುಕಿನ ಮಾರ್ಗದಲ್ಲಿ ಬರುತ್ತಿರುವಾಗಲೇ ಸಂಸಾರದ ಯಾವುದೋ ಒಂದು ವಿಷಯಕ್ಕೆ ಮಡಿವಾಳಪ್ಪಗೌಡರ ಪತ್ನಿ ಶಂಕರಮ್ಮ ಗೌಡರ ಸಾಂಸಾರಿಕ ಜೀವನದಿಂದಲೇ ಸಂಪೂರ್ಣವಾಗಿ ಹೊರಟುಹೋಗಿ ಬಿಟ್ಟರು. ಮರಣ ಹೊಂದಿದರು.

        ಈ ರೀತಿ ಬದುಕಿನಲ್ಲಿ ಒಂದು ಕಹಿ ಘಟನೆ ನಡೆದರೂ ಮಗ ಮನನೊಂದು, ಮುರಿಹಿಡಿದು ಕುಳಿತುಕೊಳ್ಳಬಾರದೆಂದು, ಮಗನಿಗೆ ತಾಯಿ ಮಲ್ಲಮ್ಮ "ನೋಡು ಮಡಿವಾಳಪ್ಪ ಗೌಡ, ನಿನ್ನ ಬಾಳ್ವೆದಾಗ ಶಂಕರಮ್ಮನ ಋಣ ಇಷ್ಟೆ ಇತ್ತು. ಅದಕ ಆಕಿ ನಡಬರಕ ಹೋದಳು. ಇಷ್ಟಕ್ಕೆ ಧೈರ್ಯಗೆಡಬೇಡ. ಕೊಡುವವನು ಅವನೆ, ಕಿತ್ತುಕೊಳ್ಳುವವನು ಅವನೆ, ಅವನು ಆಡಿಸಿದಂತೆ ಆಡುವ ನಾವು ಏನು ಮಾಡಲು ಸಾಧ್ಯ. ಇರಲಿ ಧೈರ್ಯ ತಂದುಕೊ. ನಿಮ್ಮಪ್ಪನ ಹೆಸರು ನೀ ಉಳಿಸಬೇಕು. ನಿಂಗಣಗೌಡರಿಗೆ ಮಡಿವಾಳಪ್ಪ ಗೌಡರ ತಕ್ಕ ಮಗ ಎನಿಸಿಕೊಂಡು ಮನೆತನದ ಮಾನ ಉಳಿಸುವ ಮಗ ನೀನಾಗು" ಎಂದು ಒಂದು ಷರತ್ತನ್ನು ಮಡಿವಾಳಪ್ಪ ಗೌಡರ ಮುಂದಿಟ್ಟರು. ಆ ಷರತು ಏನಿತ್ತೆಂದರೆ, "ನೀ ಏನೇ ಮಾಡು, ಊಟಕ್ಕಿರದಿದ್ದರೂ ಸರಿ ಹ್ಯಾಂಗರ ಬದುಕು. ಆದರೆ ಹಿರಿಯರ ಆಸ್ತಿ 9 ಎಕರೆ ಹೊಲಾನ ಅಳಿಯಾಕ ಮಾತ್ರ ಹೋಗಬೇಡ. ಅದರಿಂದ ನಿನಗೆ ಜಯ ಸಿಗುವದಿಲ್ಲ". ಎಂಬುದಾಗಿತ್ತು. ಮಾತನ್ನು ಉಳಿಸುವುದಕ್ಕೋಸ್ಕರ ಎಷ್ಟೇ ಕಷ್ಟ ಬಂದರೂ ದುಡಿದುಂಡರು. ಜಮೀನಿಗೆ ಮಾತ್ರ ಆಸೆ ಪಡದೇ, ಪ್ರಾಮಾಣಿಕತೆಯನ್ನು ಕಂಡ ತಾಯಿ ಮಲ್ಲಮ್ಮ ಮಗನ ಒಂಟಿತನದ ಬದುಕನ್ನು ನೋಡಿ ಗ್ರಾಮದ ಗುರು-ಹಿರಿಯರ ಸಹಕಾರದೊಂದಿಗೆ ಬ್ಯಾಕೋಡದ ಕನ್ಯೆ ನೀಲಮ್ಮನವರನ್ನು ಹುಡುಕಿ ಮಡಿವಾಳಪ್ಪ ಗೌಡರಿಗೆ ಮರು ಮದುವೆ ಮಾಡಿಸಿ ಕಳಚಿಹೋದ ಮಡಿವಾಳಪ್ಪ ಗೌಡರ ಸಂಸಾರದ ಕೊಂಡಿಗೆ ಹೊಸ ಜೀವನದ ಬೆಸುಗೆ ಹಾಕಿದರು.

     ಮರು ಮದುವೆಯಾದ ಮಡಿವಾಳಪ್ಪ ಗೌಡರ ಬದುಕು 

                            ಬೆಚ್ಚನೆಯ ಮನೆ ಇರಲು| ವೆಚ್ಚಕ್ಕೆ ಹೊನ್ನಿರಲು||
                            ಇಚ್ಚೆಯನರಿತು ನಡೆವ ಸತಿ ಇರಲು| ಸ್ವರ್ಗಕ್ಕೆ
                            ಕಿಚ್ಚ ಹಚ್ಚೆಂದ ಸರ್ವಜ್ಞ||

         ಸರ್ವಜ್ಞ ಹೇಳಿದಂತೆ ಒಬ್ಬ ವ್ಯಕ್ತಿಯ ಬದುಕು ಸುಂದರವಾಗಿರಲು ಎಲ್ಲವೂ ಅನುಕೂಲವಾಗಿರುವದರ ಜೊತೆಗೆ ಹೆಂಡತಿಯು ಪೂರಕವಾಗಿದ್ದರೆ ಸ್ವರ್ಗಕ್ಕೆ ಬೆಂಕಿಹಚ್ಚು ಎನ್ನುವ ಮಾತು ಮತ್ತು ಹಿರಿಯರು ಹೇಳುವ ಮಾತು, "ಪ್ರತಿ ಪುರುಷನ ಸಾಧನೆಯ ಹಿಂದೆ ಸ್ತ್ರೀಯ ಶಕ್ತಿ ಇರುತ್ತದೆ." ಎಂಬ ಮಾತಿನಂತೆ ನಡೆಯಿತು. ಸೊಸೆ ನೀಲಮ್ಮ,  ಅತ್ತೆ ಮತ್ತು ಗಂಡನ ಇಚ್ಚೆಯನರಿತು ಸಂಸಾರ ಮತ್ತು ದುಡಿಮೆಯಲ್ಲಿ ಸರಿಸಮಾನವಾಗಿ ಬದುಕುತ್ತಿರುವುದನ್ನು ಕಂಡು ಮಡಿವಾಳಪ್ಪ ಗೌಡರ ತಾಯಿ ಒಳಗೆ ಅಭಿಮಾನಪಟ್ಟು ಸಂತಸದಿಂದ ಹಾರೈಸುತ್ತಿದ್ದರು. ದಿನಕಳೆದಂತೆ ಮಡಿವಾಳಪ್ಪ ಗೌಡರಿಗೆ ಸಂಸಾರ ಸಾಗಿಸುವ ಬಗ್ಗೆ ಚಿಂತೆ ಹೆಚ್ಚುತ್ತಾ ಹೋಯಿತು. ಮಡಿವಾಳಪ್ಪ ಗೌಡರು, ಅವರ ತಾಯಿ, ಪತ್ನಿ ನೀಲಮ್ಮ ಮೂರು ಜನ ದಿನವಿಡೀ ದುಡಿದರೂ ಬದುಕಿಗೆ ಮಾತ್ರ ಸಾಕಾಗುತ್ತಿತು. ೯ ಎಕರೆ ಭೂಮಿ ಇವರದಾಗಿದ್ದರೂ ಅದು ಒಣಬೇಸಾಯದ ಭೂಮಿಯಾದ್ದರಿಂದ ಅದನ್ನೇ ನಂಬಿ ಇರದೆ ಬೇರೆಯವರ ಜಮೀನಿನಲ್ಲಿ ದುಡಿಯುವುದು ಅನಿವಾರ್ಯವಾಗಿತ್ತು. ಇದನ್ನು ಯೋಚಿಸಿದ ವಿದ್ಯಾವಂತ ಮಡಿವಾಳಪ್ಪ ಗೌಡರು ಊರಲ್ಲಿರುವ ಸಣ್ಣಪುಟ್ಟ ಬಟ್ಟೆ ಅಂಗಡಿಗಳಲ್ಲಿ ಲೆಕ್ಕ ಪತ್ರಗಳನ್ನು ಬರೆಯುವುದನ್ನು ಶುರು ಹಚ್ಚಿಕೊಂಡರು. ಎರಡು ಹೊತ್ತು ಜಮೀನಿನಲ್ಲಿ ಕೂಲಿ ಕೆಲಸ ಮಾಡಿ ಒಂದು ಹೊತ್ತು ಲೆಕ್ಕ ಬರೆಯುವ ಕೆಲಸ ಪ್ರಾರಂಭಿಸಿದಾಗ ಇದರಿಂದ ಸ್ವಲ್ಪ ನೆಮ್ಮದಿ ಸಿಗಲಾರಂಭಿಸಿತು. ಹಾಗೂ ಹೀಗೂ ಬದುಕು ಸಾಕಾರಗೊಳ್ಳುತ್ತಿದ್ದಂತೆಯೇ ಮಡಿವಾಳಪ್ಪ ಮತ್ತು ನೀಲಮ್ಮರ ಪ್ರಾಮಾಣಿಕ ಬದುಕಿನಲ್ಲಿ ಬೆಳಕಾಗಿ ವಂಶದ ಕುಡಿ ಚಿಗುರೊಡೆಯಿತು. 1971ರಲ್ಲಿ ಮೊದಲ ಪುತ್ರ ಬಸನಗೌಡರ ಜನನ, 1973ರಲ್ಲಿ ನಿಂಗನಗೌಡರ ಜನನ, 1979ರಲ್ಲಿ ಕಿರಿಯ ಪುತ್ರ ಸಂಗನಗೌಡ ಜನನ. ಹೀಗೆ ಅಮೂಲ್ಯವಾದ ಮೂವರು ಪುತ್ರರನ್ನು ಪಡೆದ ದಂಪತಿಗಳು, ಹಿರಿಯ ಜೀವ ಗೌಡರ ತಾಯಿಯವರು ಸಂತಸದಲ್ಲಿ ಮುಂದುವರೆದಂತಾಯಿತು. 3 ಮಕ್ಕಳೊಂದಿಗೆ ಕುಟುಂಬ ದೊಡ್ಡದಾಗಿ ಮಡಿವಾಳಪ್ಪ ಗೌಡರ ಕುಟುಂಬದ ದುಡಿತವು ದ್ವಿಗುಣವಾಯಿತು. ಈ ಸಮಯದಲ್ಲಿ ವಯೋವೃದ್ಧ ತಾಯಿ ಮಲ್ಲಮ್ಮ, "ಮಗ ಸೊಸೆ ಇಬ್ಬರೇ ದುಡಿದು ನಾ ಸುಮ್ಮನೆ ಕುಳಿತರೆ ಹೇಗೆ, ಎಷ್ಟೇ ಆದರು ನನ್ನ ಕೈಯಿಂದ ಸಾಧ್ಯವಾದಷ್ಟು ದುಡಿದರೆ ಸಂಸಾರದ ಯಾವ ಖರ್ಚಿಗಾದರೂ ಆಸರೆ ಆದೀತು" ಎಂದು ದುಡಿಯುತ್ತಲೇ ಇದ್ದರು. ಗೌಡರ ಸಾಧ್ವಿ ಪತ್ನಿ ನೀಲಮ್ಮನವರು ಕುಟುಂಬದ ಜವಾಬ್ದಾರಿಯನ್ನು ಅರಿತು ಮನೆ ಕೆಲಸ ಮುಗಿಸಿ ಮಕ್ಕಳಿಗೆ ಅಡಿಗೆ ಮಾಡಿಟ್ಟು ಕೂಲಿ ಕೆಲಸಕ್ಕೆ ಹೋಗುವುದನ್ನು ನೋಡಿ ಮಡಿವಾಳಪ್ಪ ಗೌಡರು ಸ್ವಗ್ರಾಮದ ಅಂಗಡಿಗಳಲ್ಲಿ ಲೆಕ್ಕ ಬರೆಯುವುದಲ್ಲದೆ ಪಕ್ಕದ ಊರುಗಳಿಗೆ ತೆರಳಿ ಲೆಕ್ಕ ಬರೆದರು.

           ಮಡಿವಾಳಪ್ಪ ಗೌಡರ ಲೆಕ್ಕ ಬರೆಯುವ ಕೆಲಸ ತುಂಬಾ ಪ್ರಾಮಾಣಿಕ ಮತ್ತು ಅಚ್ಚುಕಟ್ಟಾಗಿತ್ತು. ಹೀಗಾಗಿ ತಮ್ಮ ಊರಲ್ಲದೆ ಪಕ್ಕದ ಊರುಗಳಾದ ಕಲಕೇರಿ, ಕೆರಟಗಿ, ವಿಜಾಪುರ, ತಾಳಿಕೋಟೆ ಮುಂತಾದ ಕಡೆಗೆ ಜವಳಿ ಅಂಗಡಿಗಳು, ಅಡತಿ ಅಂಗಡಿಗಳನ್ನು ಹುಡುಕಿ ಅಲ್ಲಿ ಗುಮಾಸ್ತಕಿಯ ಕೆಲಸ ಮಾಡಿದರು. ತುಂಬಾ ಪ್ರಾಮಾಣಿಕವಾಗಿ ಶಿಸ್ತಿನಿಂದ ಇದ್ದ ಮಡಿವಾಳಪ್ಪ ಗೌಡರನ್ನು ಯಾರೂ ಕೆಲಸಕ್ಕೆ ಬೇಡ ಎನ್ನುತ್ತಿರಲಿಲ್ಲ. ಅವರ ಕೆಲಸ ಮತ್ತು ಅವರ ಕುಟುಂಬದ ಸಮಸ್ಯೆ ತಿಳಿದ ವ್ಯಾಪಾರಸ್ಥರು ಅವರಿಗೆ ಕೈ ತುಂಬಾ ಹಣ ನೀಡುತ್ತಿದ್ದರು.  ಈ ರೀತಿಯ ಪ್ರಾಮಾಣಿಕ ಕರ್ತವ್ಯ ಮಡಿವಾಳಪ್ಪ ಗೌಡರ ಕುಟುಂಬಕ್ಕೆ ಆಸರೆಯಾಯಿತು. ಅಲ್ಲದೆ ಹಿರಿಯ ಮಗ ಬಸನಗೌಡ, ಎರಡನೆ ಮಗ ನಿಂಗನಗೌಡರು ಅಷ್ಟೊತ್ತಿಗೆ ಶಾಲೆಗೆ ಹೋಗಲು ಆರಂಭಿಸಿದ್ದರು. ಇಬ್ಬರು ಹುಡುಗರು ಬಡತನದಲ್ಲಿ ಬೆಳೆಯುತ್ತಿದ್ದರೂ ವಿದ್ಯೆಯಲ್ಲಿ ಯಾರಿಗೂ ಕಡಿಮೆ ಇರಲಿಲ್ಲ. ಅದು ಮಡಿವಾಳಪ್ಪಗೌಡರಿಗೆ ಮತ್ತು ಪತ್ನಿ ನೀಲಮ್ಮರಿಗೆ ಹೆಮ್ಮೆಯ ಮಾತಾಗಿತ್ತು. ಏಕೆಂದರೆ "ನಮ್ಮ ಕಾಲಕ್ಕೆ ಕಲಿತರೂ ನೌಕರಿ ಸಿಗಲಿಲ್ಲ. ಕೊನೆಗೆ ಮಕ್ಕಳಿಗಾದರು ಸಿಕ್ಕರೆ ನಮ್ಮ ತಾಪತ್ರಯ ನೀಗುತ್ತದೆ"ಂದು ತಿಳಿದಿದ್ದರು. ಅದರಂತೆ ಒಂದು ವೇಳೆ ಊಟಕ್ಕೆ ಕಡಿಮೆ ಬಿದ್ದರೂ ಮಕ್ಕಳ ಓದಿಗೆ ಮಡಿವಾಳಪ್ಪಗೌಡರ ದಂಪತಿಗಳು ಕೊರತೆ ಮಾಡಲಿಲ್ಲ.

     ಮಡಿವಾಳಪ್ಪ ಗೌಡರು, ನೀಲಮ್ಮನವರು ಎಷ್ಟೇ ದುಡಿದು ದಣಿದಿದ್ದರೂ ಮಕ್ಕಳ ಜಾಣತನ, ಅವರ ಅಭ್ಯಾಸದ ವೈಖರಿಯನ್ನು ನೋಡಿ ತಮ್ಮ ನೋವನ್ನು ಮರೆಯುತ್ತಿದ್ದರು. ಇರಿಯರಾದ ಇಬ್ಬರು ಬಹಳ ನಿಷ್ಠೆಯಿಂದ ಓದಿ ಊರಿನ ಶಿಕ್ಷಕರಿಗೆ ಪ್ರೀತಿಯ ವಿದ್ಯಾರ್ಥಿಗಳಿಗಾಗಿ ಪ್ರಾಥಮಿಕ ಶಾಲೆಯನ್ನು ಮುಗಿಸಿ ಪ್ರೌಢಶಾಲೆಯಲ್ಲಿ ಅದೇ ರೀತಿಯ ಸಾಧನೆ, ಜಾಣತನದಿಂದ ಅಭ್ಯಾಸ ಮಾಡುತ್ತಿದ್ದರು. ಅದರ ಫಲವಾಗಿ ಬಸನಗೌಡರು ಎಸ್.ಎಸ್.ಎಲ್.ಸಿ.ಯಲ್ಲಿ ಪ್ರಥಮ ಶ್ರೇಣಿಯಲ್ಲಿ ಪಾಸಾದರು. ಅದರಿಂದ ಕುಟುಂಬದಲ್ಲಿ ಸಂತಸವೋ ಸಂತಸ. ಹಿರಿಯ ಜೀವ ಮಡಿವಾಳಪ್ಪ ಗೌಡರ ತಾಯಿ "ಮಗನ, ನಿನ್ನ ಕಷ್ಟವನ್ನು ಮಕ್ಕಳು ನೀಗಿಸ್ತಾರೆ" ಅಂತ ಹೇಳುತ್ತಿದ್ದರು. ಊರಲ್ಲೆಲ್ಲ ಮಡಿವಾಳಪ್ಪ ಗೌಡರ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಒಳ್ಳೆಯ ಅಭಿಪ್ರಾಯ ಇರುವುದನ್ನು ನೋಡಿ ಮುಂದಿನ ಕಾಲೇಜು ಶಿಕ್ಷಣಕ್ಕೆ ಬಸನಗೌಡರನ್ನು ತಾಳಿಕೋಟೆಗೆ ಸೇರಿಸಬೇಕು, ವಿಜ್ಞಾನ ವಿಭಾಗದಲ್ಲಿ ಓದಿಸಬೇಕೆಂದು ನಿರ್ಧರಿಸಿ ಮಗನನ್ನು ತಾಳಿಕೋಟಿ ಖಾಸ್ಗತೇಶ್ವರ ಕಾಲೇಜಿನಲ್ಲಿ ವಿದ್ಯಾಭ್ಯಾಸಕ್ಕೆ ಸೇರಿಸಲಾಯಿತು. ಆಗ ಎರಡನೆ ಮಗ ನಿಂಗನ ಗೌಡ ಎಸ್.ಎಸ್.ಎಲ್.ಸಿ. ಓದುತ್ತಿದ್ದು ಅವನು ಶಾಲೆಯಲ್ಲಿ ಎಲ್ಲರಿಗೂ ಅಚ್ಚುಮೆಚ್ಚಾಗಿ ಶಿಕ್ಷಕರ, ಊರ ಹಿರಿಯರ ಹೃದಯವನ್ನು ಗೆದ್ದು, ಎಲ್ಲರ ಪ್ರೀತಿಯಲ್ಲಿ ಬೆಳೆಯುತ್ತಿದ್ದನು.

ಮಡಿವಾಳಪ್ಪ ಗೌಡರ ಬದುಕಿನಲ್ಲಿಯ ಏರಿಳಿತಗಳು :

                                         ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು
                                         ಕಲ್ಲಾಗು ಕಷ್ಟಗಳ ವಿಧಿ ಮಳೆ ಸುರಿಯೇ
                                         ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ
                                        ಎಲ್ಲರೊಳಗೊಂದಾಗು ಮಂಕುತಿಮ್ಮ.
 ಎಂಬ ಮಾತಿನಂತೆ ದಿನೇ ದಿನೇ ಮಕ್ಕಳು ವಿದ್ಯಾಭ್ಯಾಸದ ಸಾಧನೆ ನಡೆಯುತ್ತಲೆ ಇತ್ತು. ಮಕ್ಕಳು ಬೆಳೆಯುತ್ತಲೇ ಇದ್ದರು. ಕುಟುಂಬದ ಖರ್ಚು ದಿನಕಳೆದಂತೆ ಒಂದಲ್ಲ ಒಂದು ರೀತಿಯಿಂದ ದುಬಾರಿಯಾಗುತ್ತಲೇ ಇತ್ತು. ಒಬ್ಬರ ಸಂಪಾದನೆಯಲ್ಲಿ 6 ಜನರ ಬದುಕು ನಿಧಾನವಾಗಿ ಸಾಗುತ್ತಿತ್ತು. ಎಷ್ಟು ಪ್ರಯತ್ನಪಟ್ಟರೂ ಬದುಕಿಗೆ ಏನಾದರೂ ಕಡಿಮೆ ಬೀಳುವುದು. ಅದಕ್ಕಾಗಿ ದುಡಿದಿದ್ದೆಲ್ಲ ನೀಡಿ ಅದರಿಂದ ಮುಕ್ತರಾಗುವದೆ ನಡೆದಾಗ, ಬಸನಗೌಡರ ಶಾಲೆಯ ಖರ್ಚು, ಸಂಸಾರದ ಸಣ್ಣ ಪುಟ್ಟ ಖರ್ಚು ತಾಳಲಾರದೆ ಮಡಿವಾಳಪ್ಪಗೌಡರು ಮಳೆ ಇಲ್ಲದೆ ಬರಡು ಬಿದ್ದ 9 ಎಕರೆ ಜಮೀನಿನಲ್ಲಿ ಆರು ಎಕರೆ ಜಮೀನನ್ನು 6,000 ರೂ.ಗಳಿಗೆ ಬಡ್ಡಿಯಲ್ಲಿ ಹಾಕಿ ಸಂಸಾರದ ಕೆಲ ತಾಪತ್ರೆಗಳನ್ನು ನೀಗಿಸಿಕೊಂಡರು. `ಊರಲ್ಲಿದ್ದರೆ ಬದುಕು ಸಾಗುವುದಿಲ್ಲ ಇದ್ದ ಹೊಲವನ್ನು ಬಡ್ಡಿಗೆ ಹಾಕಿದೆ' ಎಂದು ತಿಳಿದು ತಾಳಿಕೋಟೆಯ ಬಾಗವಾನರ ಬಾಳೆಹಣ್ಣಿನ ಅಡತಿ ಅಂಗಡಿಗೆ ಬಂದು ಗುಮಾಸ್ತ ಕೆಲಸ ಆರಂಭಿಸಿದರು. ಅದು ಮಡಿವಾಳಪ್ಪ ಗೌಡರ ಆರ್ಥಿಕ ಪರಿಸ್ಥಿತಿಗೆ ಸ್ವಲ್ಪ ಮಟ್ಟಿನ ಆಸರೆ ನೀಡಿತು. ಮತ್ತೆ `ಎಲ್ಲರೂ ಮಾಡುವದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ' ಎನ್ನುವಂತೆ ಬದುಕು ಒಂದು ಲೆಕ್ಕಾಚಾರದಲ್ಲಿ ಸಾಗಿತ್ತು. ಬಡವರಿಗೆ ಕಷ್ಟಗಳು ಬಂದರೆ ಬೆನ್ನು ಹತ್ತಿಯೇ ಬರುತ್ತವೆ.

          ಶಿವ ಶಿವಾ ಎಂದು ಸುಧಾರಿಸಿಕೊಳ್ಳುತ್ತಿದ್ದಂತೆ ಮಡಿವಾಳಪ್ಪ ಗೌಡರಿಗೆ ಮಗ ಬಸನಗೌಡ ಆಘಾತ ನೀಡಿದನು. ಪಿ.ಯು.ಸಿ. ಪ್ರಥಮ ವರ್ಷ ವಿಜ್ಞಾನದ ಪರೀಕ್ಷೆಯಲ್ಲಿ ತಾನು ಫೇಲಾದ ವಿಷಯ ತಿಳಿದು, ಇಷ್ಟು ಕಷ್ಟದಲ್ಲಿ ಬೆಳೆಸಿದ ತನ್ನ ತಂದೆ-ತಾಯಿಗೆ ಮೋಸ ಮಾಡಿದಂತಾಯಿತು ಎಂದು ತಿಳಿದು, ಯಾರಿಗೂ ಹೇಳದೆ ಕೇಳದೆ ಬೆಂಗಳೂರಿಗೆ ಹೋಗಿಬಿಡುತ್ತಾನೆ. ತಂದೆ-ತಾಯಿ ವಯೋವೃದ್ಧ ಅಜ್ಜಿ ಚಿಂತೆಗೆ ಒಳಗಾಗುತ್ತಾರೆ. ಬಂಧು-ಬಳಗದವರು ಅನೇಕ ಕಡೆಗಳಲ್ಲಿ ಹುಡುಕಾಡುತ್ತಾರೆ. ಎಲ್ಲಿಯೂ ಸುಳಿವು ಸಿಗದಿದ್ದಾಗ "ಏನು ಮಾಡುವುದು, ನಮ್ಮ ಹಣೆಬರಹ" ಎಂದು ಧೈರ್ಯ ತಂದುಕೊಂಡು, ಜೀವನ ಸಾಗಿಸಲು ಮುಂದಾದಾಗ ಎರಡನೆ ಮಗ ನಿಂಗನಗೌಡ ಎಸ್.ಎಸ್.ಎಲ್.ಸಿ.ಯಲ್ಲಿ ತುಂಬಾ ಚೆನ್ನಾಗಿ ತೇರ್ಗಡೆಯಾದ ಸುದ್ದಿ ಕೇಳಿ ಸಂತಸಪಟ್ಟರು.

ಮಡಿವಾಳಪ್ಪ ಗೌಡರ ಬದುಕು ಒಳ್ಳೆಯ ತಿರುವು ಕಂಡಾಗ 

 ಬಂಧುಗಳಾದವರು ಬಂದುಂಡು ಹೋಗುವರು|
 ಬಂಧನವ ಕಳೆಯಲರಿಯರೆ|
  ಎಂಬ ಶರಣರ ಮಾತಿನಂತೆ ಜೀವನ ಕ್ರಮ ಪ್ರಾಮಾಣಿಕವಾಗಿ ಬಡತನದ ಜೀವನದಲ್ಲಿ ಎಂಥಹ ಕಷ್ಟಗಳು ಬಂದರೂ ಎದೆಗುಂದದೆ, ತಪ್ಪು ದಾರಿ ತುಳಿಯದೇ ಸದಾ ತಾಯಿಯ ಪ್ರೀತಿ, ಹೆಂಡತಿ ನೀಲಮ್ಮಳ ಸಹಕಾರ, ಊಟಕ್ಕಿರದಿದ್ದರೂ ಮಕ್ಕಳ ಪಾಠಕ್ಕೆ ಕಡಿಮೆ ಬೀಳದಂತೆ ಸಾಗಿಬಂದ ಗೌಡರ ಬದುಕು ಸುಧಾರಿಸುವ ಸುಸಂಧರ್ಬ ಬಂದಾಗ, ಎರಡನೆ ಮಗ ನಿಂಗನ ಗೌಡ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ತಾನು ಓದುತ್ತಿದ ಗ್ರಾಮೀಣ ಪ್ರದೇಶದಲ್ಲಿಯೇ ಅತ್ಯುತ್ತಮ ಅಂಕ ಪಡೆದು ಪಾಸಾದ ಸುದ್ದಿ, ಇನ್ನೊಂದು ಕಡೆಗೆ ಸುಮಾರು ವರ್ಷಗಳಿಂದ ಕಾಣೆಯಾದ ಮಗ ಬಸನಗೌಡ ಪತ್ರ ತಂದ ಸಂತೋಷ, ಬದುಕಿನ ಎಷ್ಟೇ ಬವಣೆಗಳಿದ್ದರೂ "ನಾ ಪಟ್ಟ ಕಷ್ಟಕ್ಕೆ ದೇವರು ಕಣ್ಣು ತೆರೆದ" ಎಂದು ಸಂತಸದ ನಿಟ್ಟುಸಿರು ಬಿಟ್ಟು, ತಾಯಿ, ಪತ್ನಿ ನೀಲಮ್ಮ ಸಹಿತ ದೇವರಿಗೆ ಬೇಡಿಕೊಂಡರು. "ಇಷ್ಟು ದಿನ ಕೊಟ್ಟು ಕಷ್ಟ ಈ ಒಳ್ಳೆ ಸುದ್ದಿಗಳ ಜೊತೆ ಕೊನೆಯಾಗಲಿ ಭಗವಂತ" ಎಂದು ಕೇಳಿಕೊಂಡರು.

        ಪ್ರೀತಿಯ ಹಿರಿಯಮಗ ಬಸನಗೌಡ "ನನ್ನ ತಂದೆ ದೇವರಂತವರು. ಅವರ ಮನಸ್ಸು ನೋಯಿಸುವುದು ಬೇಡ" ಎಂದು ತಾನಿರುವ ಬೆಂಗಳೂರಿನಿಂದ ಕ್ಷೇಮ ಸಮಾಚಾರ ತಿಳಿಸಿದ ಪತ್ರ ಓದಿ "ನಮ್ಮ ಮಗ ಏನೂ ಅನಾಹುತ ಮಾಡಿಕೊಳ್ಳದೇ ಎಲ್ಲೋ ಒಂದು ಕಡೆ ಸಂತಸವಾಗಿದ್ದಾನೆ" ಎಂಬ ಸುದ್ದಿ ತಿಳಿಸಿದ್ದು ನಮಗೆ ಸಂತೋಷವಾಯಿತು ಎಂದುಕೊಂಡರು. `ಆದರೆ' ಎಂಬ ಉದ್ಗಾ ತಂದುಕೊಂಡಿದ್ದರು. ಏಕೆಂದರೆ ಬಸನಗೌಡರು "ನಾನು ಬೆಂಗಳೂರಿನಲ್ಲಿ ಇದ್ದೇನೆ. ಕೋಡೆಜ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದೇನೆ" ಎಂದ ಮಾತು ಬಹಳ ತೊಂದರೆ ನೀಡಿದ ವಿಷಯವಾಗಿತ್ತು. ಏಕೆಂದರೆ, "ನಾವು ಊಟಕ್ಕೆ ಇರದಿದ್ದರೂ ಒಳ್ಳೆಯದಕ್ಕೇನೆ ಗೌರವಕೊಟ್ಟು ಊರಲ್ಲಿ ಎಲ್ಲರಿಗೂ ಬೇಕಾದವರ ಕುಟುಂಬ ನಮ್ಮದಾಗಿರುವಾಗ ನಮ್ಮ ಹಿರಿಯ ಮಗ ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡ್ತಿನಿ ಅಂದಿದ್ದರೆ ಹೆಮ್ಮೆ ಪಡುತಿದೆ. ಆದರೆ ಜನರ ಸಂಸಾರವನ್ನು ಹಾಳುಮಾಡುವ ಸಾರಾಯಿ ತಯಾರಿಸುವ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿ ಬದುಕುತ್ತಿದ್ದೇನೆ ಎನ್ನುವುದು ಗೌರವ ಕಳೆಯುವಂತದ್ದು." ಎಂದು ತಿಳಿದು ಮನದಲ್ಲೆ ಮರುಗಿ ಮಡಿವಾಳಪ್ಪ ಗೌಡರು ಮಗನಿಗೆ ಮರು ಪತ್ರ ಬರೆದರು. "ನೀನೆಲಿದ್ದರೂ ನಮಗೆ ಸಂತೋಷ. ಆದರೆ ಆ ಕೋಡೆಜ್ ಫ್ಯಾಕ್ಟರಿ ಕೆಲಸ ಬಿಟ್ಟು ಬೇರೆ ಎಲ್ಲರ ಕೆಲಸಕ್ಕೆ ಸೇರಿದರೆ ನಮಗೆ ಸಂತೋಷವಾಗುತ್ತದೆ" ಎಂದು ತಿಳಿಸಿದರು. ಆದರೆ ಬಸವನಗೌಡರು ಬೆಂಗಳೂರಿನಲ್ಲಿ ಕೆಲಸ ಸಿಗುವುದೇ ಕಷ್ಟ. ನನಗೆ ಸಿಕ್ಕಿದೆ. ಇದರಿಂದ ಚೆನ್ನಾಗಿದ್ದೇನೆ. ಇಲ್ಲಿಯವರೆಗೆ ವಿಶ್ವಾಸ ಗಳಿಸಿದ್ದೇನೆ. ಕೆಲಸ ಬಿಡಾಲಿಕ್ಕಾಗುವುದಿಲ್ಲ. ಇಲ್ಲಿದ್ದರೂ ನಾನು ಅಂತಹ ಕೆಟ್ಟ ಚಟಕ್ಕೆ ಬಲಿಯಾಗುವುದಿಲ್ಲ ಎಂದು ಪ್ರಮಾಣ ಮಾಡಬಲ್ಲೆ" ಎಂದು ಮರಳಿ ತಂದೆಗೆ ವಿನಂತಿಸಿದಾಅಗಲೂ "ಹಣ, ಒಳ್ಳೆಯ ದುಡಿಮೆ ಯಾವುದಿದ್ದರೂ ಒಳ್ಳೆಯ ಗೌರವಕ್ಕಿಂತಲೂ ಕಡಿಮೇನೇ" ಎಂದು ಮೌನವಾದರು. ಇದುವೇ ಮಡಿವಾಳಪ್ಪ ಗೌಡರು ಮಕ್ಕಳ ಮೇಲಿಟ್ಟ ಅಭಿಮಾನ.


ಹಿರಿಯ ಮಗನಂತೆ ಕಿರಿಯ ಮಗ ತಮ್ಮನ್ನು ಬಿಟ್ಟು ಹೋಗದಂತೆ ಎಚ್ಚರಿಕೆ ವಹಿಸಿದ್ದು:

       "ಸಜ್ಜನರ ಸಂಗ ಹೆಜ್ಜೇನು ಸವಿದಂತೆ" ಎಂಬ ಮಾತಿನಂತೆ ಹಿರಿಯಮಗ ಬಸವನಗೌಡರಿಗೆ "ಕೆಟ್ಟದ್ದರ ಸಮೀಪ ಹೋಗಬೇಡ, ನಿನ್ನ ಗೌರವದ ಬಗ್ಗೆ ಸದಾ ಜಾಗೃತನಾಗಿರು" ಎಂದು ಸೂಕ್ಷ್ಮವಾಗಿ ತಿಳಿಸಿ ಎರಡನೆ ಮಗ ನಿಂಗನಗೌಡನ ವಿದ್ಯಾಭ್ಯಾಸವನ್ನು ಬೇರೆ ಕಡೆಗೆ ಮಾಡಿಸಿದರೆ ಹಿರಿಯ ಮಗನಂತೆ ನಮ್ಮನ್ನು ಬಿಟ್ಟು ಹೋಗುವ ವಿಚಾರ ಮಾಡಬಾರದು ಎಂದು ಯೋಚಿಸಿ ಕಿರಿಯರು ನಮ್ಮ ಕಣುಮುಂದೆ ಇರಲಿ ಎಂದು ತಾಳಿಕೋಟೆಯ ಖಾಸ್ಗತೇಶ್ವರ ಕಿರಿಯ ಮಹಾವಿದ್ಯಾಲಯದಲ್ಲಿ ಪಿ.ಯು.ಸಿ. ಪ್ರಥಮ ವರ್ಷಕ್ಕೆ ಸೇರಿಸಿದರು. "ಮಗ ನಿಂಗನಗೌಡ ತಾಳಿಕೋಟೆಯಲ್ಲಿ ಕಾಲೇಜಿಗಂತು ಸೇರಿಕೊಂದ, ನಾನು ಏಕಾಂಗಿಯಾಗಿ ಹ್ಯಾಗೋ ಅಡತಿ ಅಂಗಡಿಯಲ್ಲೆ ಮಲಗಿಕೊಳ್ಳುತ್ತೇನೆ. ಆದರೆ ಓದುವ ಮಗನನ್ನು ಅಡತಿ ಅಂಗಡಿಯಲ್ಲಿ ನನ್ನ ಜೊತೆಗೆ ಹೇಗಿರಿಸಿಕೊಳ್ಳುವುದೆ"ಂದು ನಿಂಗನಗೌಡರ ಅಭ್ಯಾಸಕ್ಕೆ ಅನುಕೂಲವಾಗುವಂತೆ ಬೇರೆಡೆಗೆ ವ್ಯವಸ್ಥೆ ಮಾಡಿದರು. ಆತನ ಅಭ್ಯಾಸ ಮುಂದೆ ಸಾಗಿತು. ಮಡಿವಾಳಪ್ಪ ಗೌಡರು ನಿಂಗನಗೌಡನ ವಿದ್ಯಾ ಪ್ರೌಢಿಮೆಯನ್ನು, ಆತನ ಗುರುಗಳು ಮಾತನಾಡಿದ ಅಭಿಮಾನದ ನುಡಿಗಳನ್ನು ಕೇಳಿ, ಮನದೊಳಗೆ ಸಂತಸಪಡುತ್ತ "ಎಷ್ಟೆ ಕಷ್ಟ ಬಂದರೂ ನಿಂಗನಗೌಡನ ಓದಿಸಲೇಬೇಕು." ಎಂದು ಮಡಿವಾಳಪ್ಪ ಗೌಡರು, ಪತ್ನಿ ನೀಲಮ್ಮ ಇಬ್ಬರೂ ಪ್ರತಿಜ್ಞೆ ಸ್ವೀಕರಿಸಿದರು. ತಿಂಗಳಿಗೆ 300 ರೂ. ಉಳಿಸಬೇಕೆಂದು ಬರಿ ಬಾಳೆಹಣ್ಣು ತಿಂದು ಮಡಿವಾಳಪ್ಪ ಗೌಡರು ಮಗನ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿದರೆ, ಊರಲ್ಲಿ ಮನೆ ಮತ್ತು ಅತ್ತೆಯವರ ಜವಾಬ್ದಾರಿಯನ್ನು ಹೊತ್ತು ಕೂಲಿ ಕೆಲಸ ಮಾಡಿ, ತನ್ನಲ್ಲಿ ಇರದಿದ್ದರೂ ಬೇರೆಯವರ ಹತ್ತಿರ ಕೈ ಚಾಚಿ ತಂದು ಗಂಡ ಮತ್ತು ಮಗನಿಗೆ (ತನಗಿರದಿದ್ದರೂ) ೫ ವರ್ಷಗಳ ಕಾಲ ತಪ್ಪದೇ ಬುತ್ತಿ ಕಟ್ಟಿ ಮಗನ ಓದಿಗೆ ಶ್ರಮಿಸಿದರು.


ಮಡಿವಾಳಪ್ಪಗೌಡರ ಪತ್ನಿ ನೀಲಮ್ಮ ಮಗನ ವಿದ್ಯಾಭ್ಯಾಸಕ್ಕೆ ಗಂಡನ ಜೊತೆ ಸಹಕರಿಸಿ ಮಗನ ಏಳ್ಗೆಗೆ ಸಹಕರಿಸಿದ ತಾಯಿ ದೇವರು
                                       ವಿದ್ಯೆ ಕಲಿಸದ ತಂದೆ
                                      ಬುದ್ಧಿ ಕೊಡದ ಗುರುವು
                                       ಬಿದ್ದಿರಲು ಬಂದು ನೋಡದಾ ತಾಯಿ
                                       ಶುದ್ಧ ವೈರಿಗಳು ಸರ್ವಜ್ಞ.
  "ಮನೆಯೇ ಮೊದಲ ಪಾಠಶಾಲೆ ಜನನಿ ತಾನೆ ಮೊದಲ ಗುರು" ಎಂಬ ಮಾತಿನಂತೆ ಮಡಿವಾಳಪ್ಪ ಗೌಡರ ಪತ್ನಿ ನೀಲಮ್ಮ ಮೂರು ಗಂಡು ಮಕ್ಕಳನ್ನು ಹೆತ್ತು ಆ ಮಕ್ಕಳಿಗಾಗಿ ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಸೋಲೊಪ್ಪಿಕೊಳ್ಳದೆ ಮಕ್ಕಳ ಏಳಿಗೆಯಲ್ಲಿ ಸಂತಸ ಕಂಡರು. ಅ ದಿನಗಳ ಕಷ್ಟವನ್ನು ಈಗಲೂ ಹೇಳುತ್ತಾರೆ.
  ಮಡಿವಾಳಪ್ಪಗೌಡರನ್ನು ಮದುವೆಯಾದಾಗಿನಿಂದಲೂ ನೀಲಮ್ಮನವರ ಮೇಲೆ ಅತ್ತೆಯ ಆರೋಗ್ಯದ ಜವಾಬ್ದಾರಿ ಇತ್ತು. ನಂತರ ಮೂರು ಗಂಡು ಮಕ್ಕಳು ಆದ ಮೇಲೆ ಅದು ಹೆಚ್ಚಾಯಿತು. ಹೆಚ್ಚಿಗೆ ಮಾತನಾಡದ ಪತಿ ಮಡಿವಾಳಪ್ಪ ಗೌಡರ ಜೊತೆಗಿದ್ದ ನೀಲಮ್ಮ "ಮೂರು ಗಂಡು ಮಕ್ಕಳಿಂದ ನಮ್ಮ ಬಡತನ ಹಿಂಗಿತು" ಎಂದು ನಂಬಿದ ಅವರ ಮಾತು ನಿಜವಾಗಿಯೂ ಅವರ ಶ್ರಮದಿಂದ ಈಡೇರಿತು. ಗಂಡ ಮಡಿವಾಳಪ್ಪ ಗೌಡರು ಪಡೆದ ಸಾಲ ತೀರಿಸಲೆಂದು ತಾಳಿಕೋಟಿ ಅಡತಿ ಅಂಗಡಿಯಲ್ಲಿ ದುಡಿಯಲು ಹೋದರೆ ನೀಲಮ್ಮ ಮನೆಯಲ್ಲಿ ಅತ್ತೆಯ ಒತೆಗೂಡಿ ದುಡಿಯುವುದು, ಸಾಕಿದ ಎಮ್ಮೆಯ ಹಾಲು, ಮೊಸರು ಮಾರಿ ಬಂದು ಗಂಡನಿಗೆ ಮತ್ತು ಮಗನಿಗೆ ದಿನನಿತ್ಯ 50-60 ರೊಟ್ಟಿ ಅದಕ್ಕೆ ಚಟ್ನಿ, ಪಲ್ಯೆ ಮಾಡಿ ತಾಳಿಕೋಟೆಗೆ ತಿಳಗುಳದಿಂದ ಹೊರಡುವ ಏಕೈಕ ಬಸ್ಸಿಗೆ ಇಡುವ ಪ್ರಾಮಾಣಿಕ ಕಾಯಕ ಐದು ವರ್ಷಗಳ ಕಾಲ ತಪ್ಪದೇ ಮಾಡಿದ್ದಕ್ಕೆ "ಇಂದು ಇಷ್ಟು ಚೆನ್ನಾಗಿದ್ದೇನೆ" ಎಂದು ನೆನೆದುಕೊಳ್ಳುತ್ತಾರೆ. "ನಾವು ಪಟ್ಟ ಕಷ್ಟವನ್ನು ನೋಡಿ ದೇವರು ನಿಂಗನಗೌಡನ ರೂಪದಲ್ಲಿ ಬಂದ" ಎಂದು ತಿಳಿಸಿದರು. ಬಿ.ಕಾಂ. ಮುಗಿದ ಮೇಲೆ ನಿಂಗನಗೌಡ ಎಂ.ಕಾಂ.ಗೆ ಬೆಳಗಾವಿಯಲ್ಲಿ ಎರಡು ವರ್ಷಗಳ ಕಾಲ ತಿಂಗಳಿಗೆ ೨ ಸಾರಿ ನೂರಕ್ಕೆ ಹೆಚ್ಚು ರೊಟ್ಟಿಗಳ ಬುತ್ತಿ ಕಟ್ಟಿ ಅವನ ವಿದ್ಯಾಭ್ಯಾಸಕ್ಕೆ ಯಾವ ರೀತಿಯ ತೊಂದರೆಯಾಗದಂತೆ ಪ್ರೋತ್ಸಾಹ ನೀಡಿದ ತಾಯಿ, "ನಮ್ಮ ಜೊತೆ ನಮ್ಮ ಮಕ್ಕಳು. ಬೇರೆ ಮಕ್ಕಳು, ಪಕ್ಕದಲ್ಲಿ ನಿಂತು ಒಳ್ಳೆಯದನ್ನು ತಿಂದರೂ ನಮಗೂ ಕೊಡಿಸಿ ಎಂದು ಹಟಮಾಡಾದೇ ನಮ್ಮೊಂದಿಗೆ ಸಹಕರಿಸಿ ಪರಿಸ್ಥಿತಿಗೆ ತಕ್ಕಂತೆ ಬಾಳುವುದನ್ನು ಕಲಿತರು. ನಮ್ಮ ಮಗ ನೂರಾರು ಯುವಕರ ಬಾಳಿಗೆ ಬೆಳಕಾಗಿದ್ದು ನಮಗೆ ಹೆಮ್ಮೆ"ಯಾದರೂ, ಹಿಂದಿನದನ್ನು ಮರೆಯದಿರಲೆಂದು ಇಂದಿಗೂ ತಾಯಿ ಹೇಳುವುದು ದೇವರ ಮಾತು.


ಮಡಿವಾಳಪ್ಪ ಗೌಡರು ಕಂಡ ಕನಸು? ಆ ಕನಸು ನನಸಾದ ಬಗೆ.


             ಮಡಿವಾಳಪ್ಪಗೌಡರು ಹಿರಿಯ ಮಗ ಬಸನ ಗೌಡರು ಇರದೇ ಇದ್ದುದರ ಬಗ್ಗೆ ಚಿಂತಿಸುತ್ತಾ ಎದೆ ಗುಂದದೆ ಎರಡನೆ ಮಗ ನಿಂಗನಗೌಡ ವಿದ್ಯಾಭ್ಯಾಸದಲ್ಲಿ ದಿನಗಳೆದಂತೆ ಪ್ರತಿಭಾನ್ವಿತನಾಗಿ ಬೆಳೆಯುತ್ತಿರುವದನ್ನು ಕಂಡು ಆ ಸಂತಸದಲ್ಲಿ ಹಿರಿಯ ಮಗನನ್ನು ಕಾಣುತ್ತಾ ಸಾಗಿರುವಾಗಲೇ ಬದುಕಿನ ನೋವು, ನಲಿವುಗಳನ್ನು ಕಾಣುತ್ತಿರುವಾಗಲೇ ನಿಂಗನಗೌಡ ಎಲ್ಲಿಯೂ ಎಡವದೇ ತಂದೆ ತಾಯಿಗಳ ಶ್ರಮಕ್ಕೆ ತಕ್ಕ ಫಲವಾಗಿ ಬಿ.ಕಾಂ.ನ್ನು ಉನ್ನತ ಶ್ರೇಣಿಯಲ್ಲಿ ಪಾಸಾದನು. ಅಂದು ತಂದೆ ಮಡಿವಾಳಪ್ಪ ಗೌಡರು, ಅವರ ತಾಯಿ ಮಲ್ಲಮ್ಮ, ಪತ್ನಿ ನೀಲಮ್ಮರ ಸಂತಸಕ್ಕೆ ಎಣೆಯೇ ಇರಲಿಲ್ಲ. ಅಷ್ಟೊತ್ತಿಗೆ ಹಿರಿಯ ಮಗ ಬಸನಗೌಡರು ಬೆಂಗಳೂರಿನ ಬದುಕಿನಿಂದ ಊರ ಕಡೆಗೆ ಹೋಗಬೇಕು ಎನ್ನುವ ತೀರ್ಮಾನಕ್ಕೆ ಬಂದಿದ್ದರು. ಅದೇ ಸಮಯಕ್ಕೆ ಬಿ.ಕಾಂ. ಮುಗಿಸಿದ ನಿಂಗನಗೌಡರಿಗೆ ತಂದೆ, "ಮುಂದೆ ಸಿ.ಎ. ಮಾಡೋ" ಎಂದಾಗ "ಅದಕ್ಕೆ ತುಂಬ ಖರ್ಚು ಆಗುತ್ತಪ್ಪಾ" ಎಂದಾಗಲೂ "ನೋಡೋಣು, ನೀ ಕಲಿತಿನೆಂದರೆ ಎನರ ಮಾಡುನು" ಎಂದರು. ಆದರೆ, ನಿಂಗನಗೌಡ "ಈಗಾಗಲೇ ನನ್ನ ತಂದೆ ತಾಯಿ ಸಾಕಷ್ಟು ನೊಂದಿದ್ದಾರೆ. ಇನ್ನು ಮೇಲೆ ಆ ತೊಂದರೆ ಅವರಿಗೆ ಬೇಡ" ಎಂದು "ನಾನು ಎಲ್ಲೆರೆ ಪಾರ್ಟ್‍ಟೈಮ್ ಕೆಲಸ ಮಾಡತೀನಿ, ಮುಂದೆ ನೋಡೋಣ" ಎಂದ. ಸುಮ್ಮನಾದರು.

        ನಿಂಗನಗೌಡನ ಪಾರ್ಟ್‍ಟೈಮ್ ನೌಕರಿಯಿಂದ ಸಿಗುವ ಆದಾಯ ಉಪಯೋಗಕ್ಕೆ ಬಾರದೇ ಇದ್ದಾಗ ಮತ್ತೆ ತಂದೆ ಹತ್ತಿರ ಬಂದು "ನಾನು ಐ.ಎ.ಎಸ್. ಮಾಡುತ್ತೇನೆ"ಂದಾಗ "ನಾ ಆವಾಗಲೇ ಹೇಳಿದಾಗ ನೀ ಮಾಡಿದ್ದರೆ ನಾ ಏನರ ಮಾಡತಿದ್ದೆ. ನನಗೆ ಈಗ ಏನನ್ನು ಮಾಡಲಾಗುವುದಿಲ್ಲ" ಎಂದು ತಂದೆ ಕೈ ಚೆಲ್ಲಿ ಕುಳಿತರು. ಛಲ ಹಿಡಿದ ನಿಂಗನಗೌಡ, ಐ.ಎ.ಎಸ್.ನ ಪ್ರಿಲಿಮಿನರಿ ಪರೀಕ್ಷೆಗೆ ಕುಳಿತು ಪ್ರಥಮ ಶ್ರೇಣಿಯಲ್ಲಿ ಪಾಸಾಗಿದ್ದರೂ, ಅಲ್ಲಿಯೂ ಸರಕಾರಿ ನೀತಿ ನಿಯಮಗಳಿಂದಾಗಿ ಅದೂ ಕೂಡಾ ಕೈ ತಪ್ಪಿ ಹೋದಾಗಲು ಕಷ್ಟ ಸುಖಗಳನ್ನು ಸರಿ ಸಮಾನವಾಗಿ ತೆಗೆದೆಕೊಳ್ಳುವುದನ್ನು ರೂಢಿಸಿಕೊಂಡಿದ್ದುದರಿಂದ ಬೇಸರ ಪಡಲಿಲ್ಲ. ಮಗನ ಇಂತಹ ಅದ್ಭುತವಾದ ಛಲ ಕಂಡು ಮಡಿವಾಳಪ್ಪ ಗೌಡರು ಮಗ ಎಂ.ಕಾಂ. ಮಾಡಲು ಅನುವು ಮಾಡಿಕೊಟ್ಟರು. ಅದಕ್ಕೆ ಖುಷಿ ಪಟ್ಟು ಬೆಳಗಾಂದಲ್ಲಿ ಎಂ.ಕಾಂ. ಮಾಡಿ ಅಭ್ಯಾಸ ಮುಂದುವರೆಸಿದರೆ ತಾಯಿ ನೀಲಮ್ಮ ಮಗು ಸಂಗನಗೌಡನನ್ನು ಹೊತ್ತು ಮನೆಯಲ್ಲಿರುವ ದನಕರುಗಳ ಹಾಲು ಮಾರಿ 2 ವರ್ಷಗಳ ಕಾಲ ಏನು ತಪ್ಪಿದರು ನಿಂಗನಗೌಡನಿಗೆ ಬುತ್ತಿ ಕಟ್ಟಿಕಳಿಸುವುದನ್ನು ಬಿಡಲಿಲ್ಲ. ಇಲ್ಲಿ ತಂದೆ ತಾಯಿ ಕಷ್ಟಪಡುವುದನ್ನು ಅರಿತ ನಿಂಗನಗೌಡ ಎಂ.ಕಾಂ.ನ್ನು ಉತ್ತಮ ರೀತಿಯಲ್ಲಿ ಉತ್ತೀರ್ಣತೆ ಪಡೆದು ಬಂದನು. ಅಷ್ಟೊತ್ತಿಗೆ ತಂದೆ ಮಡಿವಾಳಪ್ಪ ಗೌಡರು ನಿಂಗನಗೌಡನ ಎಂ.ಕಾಂ. ಅಭ್ಯಾಸಕ್ಕೆ ಮತ್ತು ಸಾಂಸಾರಿಕ ಅಡಚಣೆಗಳಿಗಾಗಿ ಮೊದಲು ಅಡವಿಟ್ಟು ಬಿಡಿಸಿಕೊಂಡ ಹಿರಿಯರ 9 ಎಕರೆ ಜಮೀನನ್ನು ಮತ್ತೆ 11,000 ರೂ. ಬಡ್ಡಿಯಲ್ಲಿ ಹಾಕಿದ್ದರು. ನಿಂಗನಗೌಡ ಎಂ.ಕಾಂ. ಮುಗಿದ ನಂತರ ಹಿರಿಯ ಮಗ ತಂದೆ ತಾಯಿಗೆ ನೆರವಾಗಲೆಂದು ಕಳುಹಿಸಿದ 5,000ಕ್ಕೆ ಇನ್ನು ಸ್ವಲ್ಪ ಸೇರಿಸಿ ಹಿರಿಯರ 9 ಎಕರೆ ಜಮೀನನ್ನು ಮರಳಿ ಬಿಡಿಸಿಕೊಂಡು ಮಡಿವಾಳಪ್ಪ ಗೌಡರು ತಾಯಿಗೆ ನೀಡಿದ ಮಾತಿನಂತೆ ಎಷ್ಟೇ ತೊಂದರೆ ಬಂದರೂ ಹಿರಿಯರ ಆಸ್ತಿ ಅಳಿಯದಂತೆ ಎಚ್ಚರ ವಹಿಸಿ ತಾಯಿಗೆ ತಕ್ಕ ಮಗನಾಗುವುದರ ಜೊತೆಗೆ ಮಕ್ಕಳಿಗೆ ತಕ್ಕ ತಂದೆಯಾದರು.

        ಎಂ.ಕಾಂ.ನ್ನು ಉತ್ತಮ ರೀತಿಯಲ್ಲಿ ಮುಗಿಸಿಕೊಂಡು ಬಂದ ನಿಂಗನಗೌಡ ಸಿಂದಗಿಯ ಸಾರಂಗಮಠದವರ ವಿದ್ಯಾಲಯದಲ್ಲಿ ಹಂಗಾಮಿ ನೌಕರನಾಗಿ, ಉಪನ್ಯಾಸಕನಾಗಿ ಜೀವನದ ಸಾಧನೆಯ ಸಮಸ್ತ ವಿಚಾರಗಳನ್ನು ಹೊತ್ತು, ಇನ್ನೂ ಅನೇಕ ವಿದ್ಯಾರ್ಥಿಗಳಿಗೆ ತಿಳಿ ಹೇಳಲು ಮುಂದಾದನು. ಅಲ್ಲಿ ಸಂಸ್ಥೆಯವರು ನೀಡುವ ಕಡಿಮೆ ಸಂಬಳ ಸರಿ ಹೋಗದಿದ್ದರೂ ಬದುಕು ಹಾಗೇ ಸಾಗುತ್ತಿತ್ತು. ದಿನ ಕಳೆದಂತೆ ನಿಂಗನಗೌಡನ ವಯಸ್ಸು ಮದುವೆಗೆ ಸಮೀಪಿಸುತ್ತಾ ಹೊರಟಿತ್ತು. ಆದರೆ ಯಾವುದೇ ರೀತಿಯ ದೃಢ ನಿಲುವು ಇರದೇ ಅದು ಹೇಗೆಂದು ಸುಮ್ಮನೆ ಕುಳಿತಿದ್ದರು. ಒಂದು ದಿನ ಬೀಗರು ಮಡಿವಾಳಪ್ಪನವರ ಮಾತು ಕೇಳಿ ಹೆಣ್ಣು ಕೊಡುವ ವಿಷಯ ಪ್ರಸ್ತಾಪ ಮಾಡಿ "ನೀನು ವಿದ್ಯಾಭ್ಯಾಸದ ಪ್ರಮಾಣ ಪತ್ರವನ್ನು ತೋರಿಸು" ಎಂದು ಕೇಳಿದಾಗ, ನಿಂಗನಗೌಡ ಅದನ್ನು ತೋರಿಸಿದನು. ಅವುಗಳನ್ನು ನೋಡಿದ ಬೀಗರು ಕ್ರಮಬದ್ಧವಾದ ವಿದ್ಯಾಸಾಧನೆಯ ಪ್ರತೀಕವಾದ ಪ್ರಮಾಣ ಪತ್ರಗಳನ್ನು ನೋಡಿಯೇ ಬೀಗರಾಗುವವರು, ಇವರ ಪರಿಸ್ಥಿತಿ ಏನೇ ಇದ್ದರೂ ನಮ್ಮ ಕನ್ಯೆಯನು ನಿಂಗನಗೌಡರಿಗೆ ಕೊಡಬೇಕೆಂದು ನಿರ್ಧರಿಸಿದರು.


 ಮಡಿವಾಳಪ್ಪ ಗೌಡರು ಮಗನ ವಿದ್ಯಾಸಾಧನೆ ಕಂಡು ಮಗಳನ್ನು ಕೊಡಬೇಕೆಂದು ಬಂದವರಿಗೆ ಹೇಳಿದ ಖಂಡ ತುಂಡು ಮಾತುಗಳು:-
   ನಿಂಗನಗೌಡ ಇರುವ ಕಾಲೇಜಿಗೆ ಹೋಗಿ ಬಂದ ಬೀಗರು ತಂದೆ ಮಡಿವಾಳಪ್ಪ ಗೌಡರ ಹತ್ತಿರ ಬಂದು "ನಿಮ್ಮ ಮಗ ನಮಗೆ ಪಸಂದ್ (ಇಷ್ಟ) ಅದಾನ. ಅವನ ವಿದ್ಯಾಭ್ಯಾಸದ ಪ್ರಮಾಣ ಪತ್ರ ನೋಡಿ ನಮಗೆ ತುಂಬಾ ಸಂತೋಷವಾಗಿದೆ." ಎಂದಾಗ ಮಡಿವಾಳಪ್ಪಗೌಡರು ಹೇಳಿದ್ದು ಹೀಗೆ : "ನಿಮಗೇನೋ ನಮ್ಮ ಮಗ ಇಷ್ಟವಾಗಿದ್ದಾನೆ ಕರೆ (ನಿಜ). ಆದರೆ ನಮಗೆ ಏನೂ ಬೆಳೆಯದ ಹೊಲ ಇದ್ದರೂ, ಮೂರು ಮಕ್ಕಳನ್ನು ಕರೆದುಕೊಂಡು ಅವರಿಗೆ ಊಟಕ್ಕೆ ಕಡಿಮೆ ಮಾಡಿದರೂ, ಪಾಠಕ್ಕೆ ಕಡಿಮೆ ಮಾಡಿಲ್ಲ. ಅದರಂತೆ ಅವರು ಕಷ್ಟ ಸುಖ ಬಂದರೂ ಒಂದೇ ರೀತಿ ತೆಗೆದುಕೊಂಡು, ವಿದ್ಯಾಭ್ಯಾಸದಲ್ಲಿ ಹೆಸರು ಮಾಡಿದ್ದು ಬಿಟ್ರೆ ಮತ್ತೇನು ನಮ್ಮ ಕೈಯಲ್ಲಿಲ್ಲ. ನೀವು ಮೆಚ್ಚಿಕೊಂಡ ವರನ ಮದುವೆ ಮಾಡಿಕೊಡಬೇಕೆಂದರೆ ಕೈಯಾಗ ಏನೂ ಇಲ್ಲ" ಅನ್ನುವ ಮಾತು ಒಂದಾದರೆ, "ಅವನಿಗೂ ಯಾವುದೇ ರೀತಿಯ ನೌಕರಿ ಇಲ್ಲ. ನಮ್ಮ ಪರಿಸ್ಥಿತಿ ಸಾಧ್ಯವಿಲ್ಲದ ಮಾತು" ಎಂದಾಗ ಬೀಗರು ಅದಕ್ಕೂ "ಜವಳಿ (ಬಟ್ಟೆಯ), ಊಟದ ಖರ್ಚು ನಾವೇ ಭರಿಸಿ ಮದುವೆ ಮಾಡಿ ಕೊಡುತ್ತೇವೆ" ಎಂದರು. ಮಡಿವಾಳಪ್ಪ್ಪ ಗೌಡರು ಪಟ್ಟು ಬಿಡದ ಬೀಗರ ಮನಸ್ಥಿತಿ ಕಂಡು "ಶುಭಸ್ಯ ಶೀಘ್ರಂ" ಎನ್ನಲು ಸಿದ್ಧರಾಗಿ, ಊರಹಿರಿಯರನ್ನು ಸೇರಿಸಿದರು. ಊರ ಹಿರಿಯರು ಬೀಗರ ಎದುರಿಗೆ ಕುಳಿತಾಗ ಕಳವಳ ಏಕೆಂದರೆ "ನಿಮ್ಮ ಮಗನಿಗೆ ಅದು ಕೊಡ್ರಿ, ಇದು ಕೊಡ್ರಿ ಎಂದು ಕೇಳಲು ನಿಮ್ಮ ಮಗನ ಹತ್ತಿರ ವಿದ್ಯಾ ಬಿಟ್ರ ಏನ್‍ಐತ್ರಿ" ಎಂದಾಗ, ಮಡಿವಾಳಪ್ಪ ಗೌಡ್ರು "ಬೇರೆ ಏನೂ ಹೇಳುದು ಬ್ಯಾಡ್ರಿ, ಹಿರಿಯರಾಗಿ ಇದ್ದ ಸ್ಥಿತಿ ಅವರಿಗೆ ಹೇಳ್ರಿ, ಒಪ್ಪಿದರೆ ಒಪ್ಪಲಿ, ಬಿಟ್ರ ಬಿಡಲಿ" ಎಂದರು.

    ಮಡಿವಾಳಪ್ಪ ಗೌಡರ ಖಂಡ ತುಂಡ ಮಾತುಗಳಿಂದ ಹೆಮ್ಮೆ ಪಟ್ಟ ಊರಿನ ಹಿರಿಯರು, "ಬೀಗರೆ ಮಡಿವಾಳಪ್ಪ ಗೌಡರು ಈ ಊರಿನಲ್ಲಿ ಅವರ ಮಕ್ಕಳೊಂದಿಗೆ ಅಭಿಮಾನ ಗಳಿಸಿದವರು. ಯಾರಿಂದಲೂ ಬೊಟ್ಟು ಮಾಡಿ ತೋರಿಸಿಕೊಂಡವರಲ್ಲ. ವಿದ್ಯಾಭ್ಯಾಸದಲ್ಲಿ ಅವರನ್ನೂ ಯಾರೂ ಮೀರಿಸಲಾರದ ಹಾಗೆ ವಿದ್ಯಾ ಸಂಪಾದನೆ ಮಾಡಿದ್ದಾರೆ. ಆದರೆ ಅವರ ಹತ್ತಿರ ಯಾವುದೇ ರೀತಿಯ ಆರ್ಥಿಕ ವ್ಯವಸ್ಥೆ ಇಲ್ಲ. ಆದರೂ ನೀವು ಹೆಣ್ಣು ಕೊಡುವುದಾದರೆ ಮಡಿವಾಳಪ್ಪ ಗೌಡರ ಮನೆಗೆ 1ಲಕ್ಷ ವರದಕ್ಷಿಣೆ, ಎರಡು ತೊಲೆ ಚಿನ್ನ ಹಾಕಿ ಮದುವೆಯ ಎಲ್ಲಾ ಖರ್ಚು ನೀವೇ ವಹಿಸುವುದಾದರೆ ನಾವು ಸಿದ್ಧರಿದ್ದೇವೆ" ಎಂದರು. ಇನ್ನು "ಮದುವೆಯಾದ ಮೇಲೆ ನೌಕರಿಗೆ ಹಣ ಬೇಕಾದರು ನೀವೇ ನೀಡಬೇಕು" ಎಂದರು. "ನೋಡ್ರಿ ನಾವು ಹುಡುಗನ ವ್ಯಕ್ತಿತ್ವಕ್ಕೆ ಮತ್ತು ವಿದ್ಯೆಗೆ ಬೆಲೆ ಕೊಟ್ಟಿದ್ದೇವೆ. ನೌಕರಿ ಬಂದರೆ ಹಣ ಕೊಡತೀವಿ, ಅದು ಸಾಲದಂತೆ ಆದರೆ, ಮದುವೆಯಲ್ಲಿ ಎಲ್ಲಾ ಖರ್ಚನ್ನು ನಾವೇ ವಹಿಸಿಕೊಳ್ಳುತ್ತೇವೆ 65 ಸಾವಿರ ವರದಕ್ಷಿಣೆ 2 ತೊಲೆ ಚಿನ್ನ ಹಾಕುತ್ತೇವೆ"ಂದಾಗ ಎಲ್ಲರೂ ಒಪ್ಪಿ ಮದುವೆಗೆ ಸಮ್ಮತಿ ನೀಡಿದರು.


 ಬೀಗರ ಪಟ್ಟು ಬಿಡದ ಹಟ - ತಂದೆಯವರ ಸಮ್ಮತಿಗೆ ನಿಂಗನಗೌಡನ ಪ್ರತಿಕ್ರಿಯೆ :

"ತಾನೊಂದು ಬಗೆದರೆ ದೈವವೊಂದು ಬಗೆಯುವುದು" ಎಂಬ ಮಾತಿನಂತೆ ಮಡಿವಾಳಪ್ಪ ಗೌಡರ ವಿಚಾರಗಳು ವಿಭಿನ್ನವಾಗಿದ್ದರೂ, ಬೀಗರ ಮಾತಿಗೆ ಮಗ ನಿಂಗನಗೌಡನಿಂದ ಬಂದ ಪ್ರತಿಕ್ರಿಯೆ ಹೀಗಿತ್ತು. "ಏನಪ್ಪಾ, ಬಂದ ಬೀಗರನ್ನು ಸೀದಾ ನನ್ನ ಹತ್ತಿರ ಕಳುಹಿಸಿಬಿಡುವುದೇನು? ಅವರು ಕಾಲೇಜಿಗೆ ನನ್ನ ಹತ್ತಿರ ಬಂದು ಅವರೇ ನನಗೆ ಚಹಾ ಕುಡಿಸಬೇಕಾಯಿತು. ನನ್ನ ಈ ಪರಿಸ್ಥಿತಿಯಲ್ಲಿ ಮದುವೆ ವಿಚಾರ ಸರಿಯೇನು?" ಎಂದಾಗ ಮದಿವಾಳಪ್ಪ ಗೌಡರು "ನೋಡು ನಿಂಗನಗೌಡ, ಹಣೆಹಕ್ಕಿ ಕೂಡಿ ಬಂದರೆ ಹಡೆದವರು ಬೇಕಿಲ್ಲ" ಎಂಬ ಮಾತು ನಮಗೇನು ಹೊರತಿಲ್ಲ. ಆ ಭಗವಂತನ ಇಚ್ಚೆ ಹೀಗಿದ್ದು, ಮತ್ತೆ ಆ ಕನ್ಯೆ ನಿನ್ನ ಕೈ ಹಿಡಿದ ಮೇಲೆನೇ ನಿನ್ನ ಅಭಿವೃದ್ಧಿಯಾಗಬೇಕೆಂಬ ಸಂಕಲ್ಪ ಆ ಭಗವಂತನದಾಗಿದ್ದರೆ ಮಾಡುವುದೇನಿದೆ. ಇರಲಿ ಹೋಗಿ ಕನ್ಯಾ ನೋಡಿ ಬರುವ ಕೆಲಸ ಮಾಡು" ಎಂದಾಗ ನಿಂಗನಗೌಡ ಮರು ಮಾತನಾಡದೆ ಬೀಗರ ಊರಿಗೆ ಹೋಗಿ ಕನ್ಯಾ ನೋಡಿದ ಮೇಲೆ ಬೀಗರು ಇವರ ಅಭಿಪ್ರಾಯ ಕೇಳಿದಾಗಲೂ ತಂದೆ ತಾಯಿಯರ ಅಭಿಮಾನವನ್ನು ಬಿಡಲಿಲ್ಲ. "ನಿಮ್ಮ ಕನ್ಯಾ ನನಗೆ ಇಷ್ಟವಾಗಿದೆ. ಆದರೆ ನನ್ನ ತಂದೆ ತಾಯಿ ಒಪ್ಪಿದ ಮೇಲೆನೇ ಮದುವೆ. ಆದರೆ ಅವರಿಗೆ ಒಪ್ಪಿಗೆಯಾಗದಿದ್ದರೆ ನಿಮ್ಮ ಹಣೆಬರಹ" ಎಂದು ಮನೆಗೆ ಬಂದು ತಂದೆ ನಿಂಗನಗೌಡ ಅಭಿಮಾನದಿಂದ ಹೇಳಿದ ಮಾತು, "ಕನ್ಯಾ ನೋಡಿ ಬಂದೀನಿ. ನೀವು ನೋಡಿ ಏನನ್ನಾದರೂ ಹೇಳ್ರಿ. ಆದರೆ ಬೀಗರ ಊರಿಗೆ ಹೋಗುವುದಾದರೆ ಜೀಪು ಮಾಡಿಕೊಂಡು ಹೋಗ್ರಿ, ಬಸ್ಸಿಗೆ ಹೋಗುವುದಾದರೆ ಹೋಗುವುದು ಬೇಡ" ಎಂದು ಹೇಳಿ ಸುಮ್ಮನಾದ.

    ಮಗನ ಮಾತು ಮಡಿವಾಳಪ್ಪ ಗೌಡರ ಅಭಿಮಾನವನ್ನು ಹೆಚ್ಚಿಸಿ, ಸಾಧ್ಯವಿಲ್ಲದಿದ್ದರೂ "ಮೀಸೆ ಹೊತ್ತ ಗಂಡಸನಿಗೆ ಡಿಮ್ಯಾಂಡಪ್ಪೊ ಡಿಮ್ಯಾಂಡು" ಎನ್ನುವ ಮಾತಿಗೆ ಜೀಪೊಂದನ್ನು ತೆಗೆದುಕೊಂಡು ಹೋಗಿ ಮಾತು ಮುಗಿಸಿಕೊಂಡು ಬಂದರು. ಕೆಲ ದಿನಗಳಲ್ಲಿಯೇ ಹಿರಿಯ ಮಗ ಬಸನಗೌಡನಿಗೂ ಕಂಕಣ ಕೂಡಿ ಬಂತು. ಬಸನಗೌಡರು, ತಮ್ಮ ನಿಂಗನಗೌಡನ ಪ್ರೋತ್ಸಾಹ, ಸಹಕಾರದಿಂದ ಎಕ್ಸ್‍ಟರ್ನಲ್ ಪರೀಕ್ಷೆ ಕಟ್ಟಿ ಬಿ.ಎ. ಪದವೀಧರನಾಗಿದ್ದನು. ನಿಂಗನಗೌಡನ ಮದುವೆಯನ್ನಂತೂ ಅವರ ಬೀಗರೇ ನಿರ್ವಹಿಸುತ್ತಾರೆ. ಬಸನಗೌಡನ ಮದುವೆ ಹೇಗೆ ಎಂದಾಗ ಉದಾರ ಹೃದಯದ ನಿಂಗನಗೌಡರ ಬೀಗರು ಹಿರಿಯ ಮಗನ ಮದುವೆಯನ್ನು ನಾವೇ ಮಾಡಿ ಕೊಡುತ್ತೇವೆಂಬ ಹಿರಿಮೆ ಮೆರೆದಾಗ ಮಡಿವಾಳಪ್ಪಗೌಡರ ಅಭಿಮಾನ ಒಪ್ಪಿಗೆ ಕೊಡುವ ಸ್ಥಿತಿಯಲ್ಲಿಲ್ಲದ ಪರಿಸ್ಥಿತಿ. ಅವರನ್ನು ಒಪ್ಪಿಸಿದ್ದರ ಫಲವಾಗಿ ಇಬ್ಬರು ಹಿರಿಯ ಮಕ್ಕಳು ಸಂಸಾರಕ್ಕೆ ಪಾದಾರ್ಪಣೆ ಮಾಡಿದರು. ಮಡಿವಾಳಪ್ಪಗೌಡರು ಮತ್ತು ಅವರ ಪತ್ನಿ ನೀಲಮ್ಮರಿಗೆ ಮಕ್ಕಳ ಮದುವೆ ಸಂತಸ-ಸಂಭ್ರಮ ತಂದಿದ್ದರೂ ಮದುವೆಗಿಂತ ಮುಂಚೆ ಮಕ್ಕಳಿಗೆ ನೌಕರಿ ಬಂದಿದ್ದರೆ ಚೆನ್ನಾಗಿರುತ್ತಿತ್ತು ಎಂಬ ಆತಂಕ ಕಾಡಿತ್ತು.

     ಮಡಿವಾಳಪ್ಪಗೌಡರ ಮಕ್ಕಳು ಮದುವೆಯಾಗಿ ಕೆಲ ದಿನಗಳು ಕಳೆಯುತ್ತಿದ್ದಂತೆ, ಒಂದು ಒಳ್ಳೆಯ ಸುದ್ದಿ ಬಂದು ಹೋಯಿತು. ಏನೆಂದರೆ ಮದುವೆಗಿಂತ ಮುಂಚಿತವಾಗಿ ಎಫ್.ಡಿ.ಸಿ. ಪರೀಕ್ಷೆ ನೀಡಿದ್ದ ನಿಂಗನಗೌಡ ಪ್ರಥಮ ಶ್ರೇಣಿಯಲ್ಲಿ ಪಾಸಾಗಿದ್ದ. ಆಗ ಬೀಗರಿಗೂ ಖುಷಿಯಾಯಿತು. ಆ ನೌಕರಿಯನ್ನು ನಮ್ಮ ಅಳಿಯನಿಗೆ ಕೊಡಿಸಬೇಕೆಂದು ಶ್ರಮಪಟ್ಟು, ವರದಕ್ಷಿಣೆ ದುಡ್ಡನ್ನು ಖರ್ಚು ಮಾಡಿದರೂ, ಜಾತಿಯ ವಿಷಯದಲ್ಲಿ ಆ ಕೆಲಸ ನಿಂಗನಗೌಡನಿಗೆ ದಕ್ಕಲಿಲ್ಲ. ಆದರೂ ನಿಂಗನಗೌಡ ಎದೆ ಗುಂದದೆ ಸಂಸಾರದಲ್ಲಿದ್ದುಕೊಂಡು ಖಾಸಗಿ ಕೋಚಿಂಗ್ ಶಾಲೆಯೊಂದರಲ್ಲಿ ಕೆಲಸ ನಿರ್ವಹಿಸಿ ಬೋಧನಾ ವಿಧಾನಕ್ಕೆ ಹೆಸರು ಮಾಡಿದ್ದನು. ಎಷ್ಟೇ ದುಡಿದರೂ ಸಂತೃಪ್ತಿ ತರದೆ ಸಾಧನೆಯ ಬದುಕಿಗೆ ತಾನೇ ಸ್ವಂತವಾದ ಒಂದು ತರಬೇತಿ ಸಂಸ್ಥೆ ಕೇಂದ್ರವನ್ನು ಪ್ರಾರಂಭಿಸಿದನು. ಅದು ಅಂದುಕೊಂಡಂತೆ ಪ್ರಗತಿಯಲ್ಲಿರದಿದ್ದ ಕಾರಣ ಬಿಜಾಪುರದಲ್ಲಿ ಚಾಣಕ್ಯ ಕರಿಯರ್ ಅಕಾಡೆಮಿ ಎಂದು 2000ದಲ್ಲಿ ಪ್ರಾರಂಭವಾಗಿ ನಿಂಗನಗೌಡನ ಎಡೆಬಿಡದ ಕೆಲಸದಿಂದ, ತಂದೆ ತಾಯಿಯವರ ನಿಸ್ವಾರ್ಥದ ಸಹಕಾರದಿಂದ ಇಂದು ದಶಮಾನೋತ್ಸವದ ಹಂತಕ್ಕೆ ಬಂದು ನಿಂತಿದೆ. (ಈಗ ದಶಮಾನೋತ್ಸವ ಪೂರೈಸಿ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ.)

    ಮಡಿವಾಳಪ್ಪಗೌಡರ ಕನಸನ್ನು ಮಗ ಸಾಕಾರಗೊಳಿಸಿದಾಗ:- 

             ಮಡಿವಾಳಪ್ಪಗೌಡರು ಅವರ ಧರ್ಮಪತ್ನಿ ನೀಲಮ್ಮ ಎಷ್ಟೇ ಕಷ್ಟ ಬಂದರೂ ಸಮನಾಗಿ ಹಂಚಿಕೊಂಡು ತಾವಿಬ್ಬರೆ ನುಂಗಿ ಅನುಭವಿಸಿದರು. ಆದರೆ ಮಕ್ಕಳಿಗಾಗಲೀ ಬಂಧುಗಳಿಗಾಗಲೀ ಎಂದೂ ಹೇಳಿಕೊಂಡವರಲ್ಲ. ಇಂದು ಪ್ರೀತಿಯ ಮಗ ನಿಂಗನಗೌಡ, ಆ ನೊಂದ ಬೆಂದ ತಂದೆ-ತಾಯಿಗಳ ಆಸೆ ಈಡೇರಿಸಿದ್ದನ್ನು ಕಂಡು "ನಾವು ಮಕ್ಕಳಿಗಾಗಿ ಮಾಡಿದ ಶ್ರಮ ಇಂದು ಸಾರ್ಥಕವಾಗಿದೆ" ಎನ್ನುತ್ತಾರೆ.

        "ಹತ್ತು ಹಡಿಯುವದಕ್ಕಿಂತ ಒಂದು ಮುತ್ತಿನಂತಹದನ್ನು ಹಡಿಯಬೇಕು ಎನ್ನುವಂತ ನನ್ನ ಮಗ ನಿಂಗನಗೌಡ ಮುತ್ತಿನಂಥ ಮಗನಾಗಿ ತನ್ನ ಒಡಹುಟ್ಟಿದವರನ್ನು ಮುತ್ತಿನಂತೆ ಜೋಪಾನಮಾಡಿ, ಆ ಎರಡು ಮಕ್ಕಳನ್ನು ಮುತ್ತು ಮಾಡಿದ್ದಾನೆ ಎಂದು ಮಡಿವಾಳಪ್ಪ ಗೌಡರು, ನೀಲಮ್ಮ ಅಂದುಕೊಂಡಿದ್ದಾರೆ. "ಯಾವಾಗ ನಮ್ಮ ನಿಂಗನಗೌಡ ಒಳ್ಳೆಯ ವಿದ್ಯಾವಂತನಾಗಿ ಅನೇಕ ಕಡೆ ಕೆಲಸಕ್ಕಾಗಿ ಅಲೆದಾಡಿದ್ದು ಆಯಿತು. ಕೆಲಕಡೆ ಕೆಲಸ ಮಾಡಿದ್ದು ಆಯಿತು, ಯಾವುದು ತೃಪ್ತಿ ತರದೇ ಇದ್ದಾಗ ಧೈರ್ಯದಿಂದ ಚಾಣಕ್ಯ ಕರಿಯರ್ ಅಕಾಡೆಮಿ ಪ್ರಾರಂಭ ಮಾಡಿದ್ದು, ಅದು ಬಹುಬೇಗ ಅವನ ಕೈ ಹಿಡಿಯಿತು. ಕೆಲವು ದಿನಗಳಲ್ಲಿ ರಾಜ್ಯದಲ್ಲಿ ಒಳ್ಳೆಯ ಹೆಸರನ್ನು, ಕನಸಿನಲ್ಲೂ ಕಾಣದೆ ಇರುವ ಸಂಪತ್ತು, ಸಮೃದ್ಧಿಯನ್ನು ನೀಡಿತು. ಆಗಲೂ ನನ್ನ ಮಗ ತಾನು ನಡೆದು ಬಂದ ದಾರಿಯನು ಮರೆಯಲಿಲ್ಲ. ತಮ್ಮನೆ ಹೀಗಿರುವಾಗ ಅಣ್ಣ ಹೇಗಿದ್ದಿರಬೇಕೆಂಬುದನ್ನು ನಾವಿಲ್ಲಿ ಹೇಳಲೇಬೇಕಾಗುತ್ತದೆ. ತಾನು ಪಿ.ಯು.ಸಿ. ಫೇಲ್ ಆದಮೆಲೆ ತಂದೆಗೆ ಆರ್ಥಿಕವಾಗಿ ಹೊರೆಯಾಗುವುದೆಂದು ತಿಳಿದು, ನಾ ಎಲ್ಲಿಯಾದರೂ ಹೋಗಿ ಉಳಿದರೆ ನನ್ನ ಖರ್ಚು ನನ್ನ ತಮ್ಮ ನಿಂಗನಗೌಡನ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲಿ, ಆತ ತುಂಬಾ ಜಾಣನಿದ್ದಾನೆ ಎಂದು ವಿಚಾರ ಮಾಡಿ ತ್ಯಾಗ ಮಡಿದ ಅಣ್ಣನ ಋಣವನ್ನು ನನ್ನ ಮಗ ನಿಂಗನಗೌಡ ತನ್ನ ಮೇಲೆ ಇಟ್ಟುಕೊಳ್ಳದೆ ಅಕಾಡೆಮಿ ಪ್ರಾರಂಭವಾದ ಮೇಲೆ ಅಣ್ಣನಿಗೆ ತಿಳಿಸಿ ಅವನು ಬೆಂಗಳೂರಿನಲ್ಲಿ ಇದ್ದರೂ ಇಲ್ಲಿ ಎಕ್ಸ್‍ಟರ್ನಲ್ ಪರೀಕ್ಷೆಗಳನ್ನು ಕಟ್ಟಿಸಿ, ಅಣ್ಣನನ್ನು ಪದವೀಧರನನ್ನಾಗಿಸಿ, ಅಷ್ಟಕ್ಕೆ ಸುಮ್ಮನಿರದೆ, ನಿನ್ನ ಪದವಿ ಆಗಿದೆ. ನನಗೆ ಚಾಣಕ್ಯ ಕರಿಯರ್ ಅಕಾಡೆಮಿಯ ಕೆಲಸ ಪ್ರಾರಂಭವಾಗುತಿದೆ, ಎಂದು ತನ್ನಲ್ಲಿಗೆ ಕರೆಸಿಕೊಂಡು ಸ್ವತಂತ್ರವಾಗಿ ಅಭಿಮಾನದಿಂದ ಬಾಳಲು ಅವಕಾಶಕೊಟ್ಟು, ಕೊನೆಗೆ ಆತನು ಎಫ್.ಡಿ.ಸಿ. ಎಂಬ ಸರಕಾರಿ ಕೆಲಸಕ್ಕೆ ಸೇರುವಂತೆ ಮಾಡಿ, ಹುಟ್ಟುತ್ತ ಅಣ್ಣ ತಮ್ಮರು, ಬೆಳೆಯುತ್ತ ದಾಯಾದಿಗಳು ಎಂಬ ಮಾತನ್ನು ಹುಸಿಗೊಳಿಸಿದರು." ಎಂದು ಅಭಿಮಾನ ವ್ಯಕ್ತಪಡಿಸುತ್ತಾರೆ.

ಮಕ್ಕಳನ್ನು ಮೇಲಕ್ಕೆ ತರಲು ಮಡಿವಾಳಪ್ಪಗೌಡರ ಬದುಕಿನಲ್ಲಿ ನಡೆದ ಪ್ರಮುಖ ಘಟನೆಗಳು: 

 ೧.ಬದುಕು ದುಸ್ತರವಾದಾಗ ಶರಣರ ವಚನಗಳನ್ನು ಓದಿ ಅವುಗಳಂತೆ ನಡೆದವರು ಮಡಿವಾಳಪ್ಪ ಗೌಡರು.
                            ಒಡಲಗೊಂಡ ಹಸಿವ
                             ಒಡಲಗೊಂಡ ಹುಸಿವ
                            ಒಡಲಗೊಂಡವನೆಂದು ಅಡಿಗಡಿಗೊಮ್ಮೆ ಜಡಿದು
                            ನುಡಿಯದಿರೆನ್ನ
                            ನೀನೊಮ್ಮೆ ಒಡಲಗೊಂಡವನಾಗಿ ನೋಡ ರಾಮನಾಥ
       ಎಂಬ ಮಾತಿನಂತೆ ದೇವರು ಕೊಡುವ ಪ್ರತಿ ಕಷ್ಟವನ್ನು ಜೀವನದ ಪರಿಪಾಠಗಳೆಂದು ತಿಳಿದು ಮುಂದೆ ಬಂದರು. ಒಂದು ಸಾರಿ ತಾಳಿಕೋಟೆಯ ಅಡತಿ ಅಂಗಡಿಯಲ್ಲಿ ಕೆಲಸ ಮಾಡುತ್ತ ಬದುಕು ಸಾಗಿಸುತ್ತಿರುವಾಗ ಹೊಟ್ಟೆ ಬಟ್ಟೆ ಮಕ್ಕಳ ವಿದ್ಯಾಭ್ಯಾಸಕ್ಕೆ ಸಾಕಾಗದೆ ಇರುವಂತಹ ಸಂದರ್ಭದಲ್ಲಿ ಸ್ವಲ್ಪವಾದರೂ ಹಣ ಉಳಿಸಬೇಕೆಂದು ಕೇವಲ ಬಾಳೆಹಣ್ಣು ತಿಂದು ನೀರು ಕುಡಿದು ಬಂದ ವೇತನವನ್ನು ಉಳಿಸುತ್ತಿದ್ದರು. ಇಂತಹ ಸಂದರ್ಭದಲ್ಲಿ ಮಡಿವಾಳಪ್ಪಗೌಡರಿಗೆ ಅಲ್ಸರ್ ಕಾಣಿಸಿಕೊಂಡಿತು. ಕೆಲವರು ಇದನ್ನು ಕೇಳಿ 'ಅದು ಆಗಬಾರದು. ಮೊದಲು ದವಾಖಾನೆ (ಆಸ್ಪತ್ರೆ)ಗೆ ತೋರಿಸಿರಿ' ಎಂದಾಗಲೂ ಗಾಬರಿಗೊಳ್ಳದೆ ಎಷ್ಟೇ ಹೊಟ್ಟೆನೋವು ಬಂದರೂ ಅದರ ಕಡೆಗೆ ಲಕ್ಷಿಸದೆ ದುಡಿಯುತ್ತಿದ್ದರು. ಮನೆಯಲ್ಲಿ ಮಡದಿ ಮಕ್ಕಳಿಗೆ ಹೇಳಿದರೆ ನೋವು ಪಡುತ್ತಾರೆಂದು ಅಲ್ಲಲ್ಲಿ ಆಯುರ್ವೇದ ಔಷಧಿ, ಉಪಚಾರ ಮಾಡಿಕೊಂಡರೂ ಅದು ಕಡಿಮೆಯಾಗಲಿಲ್ಲ. ಇವರು ಖರ್ಚು ಮಾಡಿ ತೋರಿಸಲಿಲ್ಲ. ಕಾಲಕ್ರಮೇಣ, ಅಲ್ಸರ್ ಬೇಸತ್ತು ತಾನೆ ತಾನಾಗಿ ಕಡಿಮೆಯಾಯಿತು. ಈ ರೀತಿಯ ಮಡಿವಾಳಪ್ಪ ಗೌಡರ ವಿಷಯ ಸಂಸಾರದಲ್ಲಿಯ ಹಟಯೋಗ ಎನ್ನಬಹುದು.

2). ಮಡಿವಾಳಪ್ಪ ಗೌಡರು ಬಾಳೆಹಣ್ಣಿನ ಅಡತಿ ಅಂಗಡಿಯಲ್ಲಿ ಗುಮಾಸ್ತಕಿ ಮಾಡುವಾಗ ಅಡತಿ ಅಂಗಡಿಯಲ್ಲಿಯೇ ಅವರ ವಾಸ್ತವ್ಯವಾಗಿತ್ತು. ಹಗಲು ಹೊತ್ತಿನಲ್ಲಿ ಇಡೀ ದಿನ ಲೆಕ್ಕ ಪತ್ರ ಬರೆಯುವುದರಲ್ಲಿ ಹೋಗುತ್ತಿತ್ತು. ಮನೆಕೆಲಸವೆಲ್ಲಾ ಮುಗಿಸಿ ಕಷ್ಟಪಟ್ಟು ತಪ್ಪದೆ ನೀಲಮ್ಮನವರು ಮಗ ಮತ್ತು ಗಂಡನಿಗಾಗಿ ಬುತ್ತಿ ಇಡುತ್ತಿದ್ದರು.
        ಮಡಿವಾಳಪ್ಪ ಗೌಡರು ಇಲ್ಲಿ ಹೆಮ್ಮೆಯಿಂದ ಹೇಳುವ ಮಾತೆಂದರೆ ನನ್ನ ಮಗನ ಆ ಸನ್ನಿವೇಶಗಳು ನನ್ನ ಕಣ್ಣಿಂದ ದೂರಾಗಿಲ್ಲವೆಂದು. ಅದೇನೆಂದರೆ, 'ದಿನಾಲೂ ಬೆಳಿಗ್ಗೆ ಸ್ನಾನ ಮುಗಿಸಿಕೊಂಡು ಶುಚಿಯಾಗಿ ಮಗ ನನ್ನ ಹತ್ತಿರ ಬಂದು ಅಪ್ಪಾ ನಾಷ್ಟಾ ಅಂತ ಹೇಳಿ ಅದು ಕೊಡಿಸು ಇದು ಕೊಡಿಸು ಎಂದು ಕೇಳದೆ, ನನ್ನಲ್ಲಿಗೆ ಬಂದು ಒಂದು ಗ್ಲಾಸು ನೀರು ಕುಡಿದು ಪೇಪರ್ ಓದಿ ಮುಗಿಸುತ್ತಿದ್ದ. ವೃತ್ತ ಪತ್ರಿಕೆಯ ಯಾವ ಸಣ್ಣ ವಿಷಯವನ್ನೂ ಬಿಡದಂತೆ ಓದಿ ಮುಗಿಸಿ ಕಾಲೇಜಿಗೆ ಹೋಗುವ ನನ್ನ ಮಗನನ್ನು ನೋಡಿ ನಾನು ಮನದಲ್ಲೆ ಹೆಮ್ಮೆ ಪಡುತ್ತಿದ್ದೆ. ಅವನಿಂದು ಇಷ್ಟು ಎತ್ತರಕ್ಕೆ ಬಂದು ತನ್ನಂತೆ ನೋವಿನಲ್ಲಿರುವ ನೂರಾರು ವಿದ್ಯಾರ್ಥಿಗಳಿಗೆ ಆಸರೆಯಾಗಿದ್ದಾನೆ. ಅದಕ್ಕಿಂತ ಹೆಚ್ಚಿನದ್ದು ಯಾವುದಿದೆ' ಎನ್ನುತ್ತಾರೆ.

೩. `ಬೆಳೆಯುವ ಸಿರಿ ಮೊಳಕೆಯಲ್ಲಿ' ಎನ್ನುವ ಗಾದೆ ಮಾತು ನನ್ನ ಮಗ ನಿಂಗನಗೌಡನಿಗೆ ಹೊಂದುತ್ತದೆನ್ನುತ್ತಾರೆ ಮಡಿವಾಳಪ್ಪಗೌಡರು. ಆರು ವರ್ಷದ ಬುದ್ಧಿ ನೂರು ವರ್ಷದ ತನಕ ಎನ್ನುವ ಮಾತಿನಂತೆ `ನನ್ನ ಹಿರಿಯ ಮಗ ಬಸನಗೌಡ ತಮ್ಮನ ವಿದ್ಯಾಭ್ಯಾಸ ಚೆನ್ನಾಗಿ ಆಗಲಿ ಎಂಬ ತ್ಯಾಗ ಮನೋಭಾವದಿಂದ ದುಡಿಯಲು ಹೋಗಿದ್ದನ್ನು ತಿಳಿದು ನಿಂಗನಗೌಡ ಎಂ.ಕಾಂ. ಓದುವವರೆಗೆ ಬೆಳಿಗ್ಗೆ ಒಂದು ಕಪ್ ಚಹಾ ಕುಡಿದರೆ ಏನು ಬರುವದೋ ಅದೇ ಹಣದಿಂದ ಒಂದು ಪೇಪರ್ ಓದಿದರೆ ಏನಾದರೂ ವಿಷಯ ಸಿಗುತ್ತದೆಂದು ಚಹಾ ಕುಡಿಯದೆ ಪೇಪರ್ ಓದಿ ಜ್ಞಾನ ಸಂಪಾದನೆ ಮಾಡಿ ಬದುಕಿನಲ್ಲಿ ಸಾಕಷ್ಟು ಸಾಧನೆ, ಸಂಪತ್ತನ್ನು ಕಂಡು ಸುಖದ ಸುಪ್ಪತ್ತಿಗೆಯಲ್ಲಿ ಇರುವ ಸ್ಥಿತಿಯಲ್ಲಿದ್ದರೂ ನಮ್ಮ ಮಗ ಚಹ ಕುಡಿಯದೆ ಇರುವದು ನಮಗೆ ಹೆಮ್ಮೆಯಾಗಿದೆ.' ಎಂದು ನೆನೆಸಿ ಸಂತಸ ಪಡುತ್ತಾರೆ.


ಮಡಿವಾಳಪ್ಪಗೌಡರ ಮಡದಿ ನೀಲಮ್ಮಳ ಮನದಾಳದ ಮಾತು: 

           ನಾನು ಮಡಿವಾಳಪ್ಪನವರನ್ನು ಪಡೆದದ್ದು ಒಂದು ಭಾಗ್ಯವೆಂದುಕೊಂಡಿದ್ದೆ. ಜಾಸ್ತಿ ಮಾತನಾಡದ ಪತಿ, ಸದಾ ನನ್ನ ಪತಿಯ ಬದುಕಿನ ಬಗ್ಗೆ ಚಿಂತಿಸಿ ಅವರಿಗೆ ಧೈರ್ಯ ತುಂಬುವ ಅತ್ತೆಯೊಂದಿಗೆ ಬಂದು ಸೇರಿಕೊಂಡ ನಾನು ಮನೆಗೆ ಮೊದಲಗಿತ್ತಿಯಾಗಿ ಬಂದಾಗ ಮನೆಯಲ್ಲಿ ಊಟಕ್ಕೆ ಉಡಲಿಕ್ಕೆ ಕೊರತೆ ಇತ್ತು. ಅದೇ ಸದಾ ಮೌನದಿಂದಲೆ ಎಲ್ಲ ಗೆಲ್ಲುವ ಗಂಡ, ವಯಸ್ಸು ಹೋಗಿ ಮುಪ್ಪಿನಲ್ಲಿದ್ದರೂ `ದುಡಿದುಂಡರೆ ಅದುವೇ ಸ್ವರ್ಗ, ಹಂಗಿನ ಅರಮನೆಗಿಂತ ಇಕ್ಕಟ್ಟಿನ ಗುಡಿಸಲು ಲೇಸು' ಎಂಬ ಅತ್ತೆಯವರ ಮಾತು ನನ್ನ ಮನಸ್ಸನ್ನು ಇನ್ನಷ್ಟು ಗಟ್ಟಿಗೊಳಿಸಿತು. ದಿನ ಕಳೆದಂತೆ ಬದುಕು ಕಷ್ಟವಾಗುತ್ತಿದ್ದರೂ ಅವರಿಗೆ ನಾವು, ನನಗೆ ಅವರು ಇಬ್ರಿಗೂ ಮಾರ್ಗದರ್ಶನ ಅತ್ತೆ. ಗೌಡರ ಗುಮಾಸ್ತಿಕೆಯ ಸಂಪಾದನೆ, ನಮ್ಮ ಶಕ್ತಿಗೆ ತಕ್ಕ ದುಡಿಮೆಯಿಂದ ಪ್ರಾಮಾಣಿಕವಾಗಿ ಜೀವನ ನಡೆಸಿ, ಮಕ್ಕಳಿಂದ ನಮ್ಮ ಜೀವನ ಹಸನಾಗಿಸಿಕೊಳ್ಳಬೇಕೆಂದು ಕನಸನ್ನು ಹೊತ್ತು ಹರಕೆ ಹೊತ್ತು ಹೆತ್ತ ಮೂರು ಮುತ್ತಿನಂತೆ ಮಕ್ಕಳು ಇಂದು ಒಳ್ಳೆಯ ಸ್ಥಿತಿಯಲ್ಲಿದ್ದರೂ ಮೊದಲಿನಂತೆ ಸಾಮಾನ್ಯ ಜೀವನದಲ್ಲಿರುವುದು ನನ್ನ ಭಾಗ್ಯ. ಇದು ಬಹಳ ಜನರಿಗೆ ಸಿಗುವುದಿಲ್ಲ. 21ನೇ ಶತಮಾನ ನೋಡಬಾರದ್ದನ್ನ ನೋಡುತ್ತಿದ್ದರೂ, ಕೇಳಬಾರದ್ದನ್ನ ಕೇಳುತ್ತಿದ್ದರೂ, ಹೆತ್ತ ತಂದೆ ತಾಯಿಯನ್ನು ಕೊಲ್ಲುವ ಮಕ್ಕಳು ಹುಟ್ಟುತ್ತಿದ್ದರು, ನನ್ನ ಮಕ್ಕಳು ಶರಣರಂತೆ ಸತ್ಯದ ದಾರಿಯಲ್ಲಿ ನಡೆಯುವುದನ್ನು ಕಂಡ ಈ ತಾಯಿಯ ಹೃದಯಕ್ಕೆ ಇನ್ನೆಂತಹ ವರವನ್ನು ಆ ಭಗವಂತ ಕೊಡಬೇಕು, ಸಾಕು ನಮ್ಮ ಜೀವನ ಸಾರ್ಥಕವಾಗಿ ಹೋಗಿದೆ.

    `ಕಷ್ಟಪಟ್ಟರೆ ಕೈಲಾಸ, ಕಾಯಕವೇ ಕೈಲಾಸ' ಎಂಬ ಮಾತನ್ನು ನನ್ನ ಪತಿ ಮಡಿವಾಳಪ್ಪಗೌಡರು, ನನ್ನ ಮಕ್ಕಳು ಅರ್ಥಪೂರ್ಣವಾಗಿಸಿದ್ದಾರೆ. ಒಂದು ದಿನವೂ ಕೆಟ್ಟ ಧ್ವನಿಯಲ್ಲಿ ಮಾತನಾಡದೆ ಮೌನದ ಮಾತನ್ನೆ ಅರ್ಥಮಾಡಿಕೊಂಡು ಸಂಸಾರದಲ್ಲಿದ್ದು, ಶರಣ ಸಂಸ್ಕೃತಿ ಅರಿಯದಿದ್ದರೂ ಆ ಶರಣರು ನೀಡಿದ ಸಪ್ತ ಸೂತ್ರಗಳನ್ನು ಸಾಕಾರಗೊಳಿಸಿದ ಜೀವನ ನನ್ನ ಮಕ್ಕಳದ್ದು. ಅದು ಇಂದಿಗೂ ಹಾಗೆ ಇದೆ, ಮುಂದೆಯೂ ಹಾಗೆ ಇರುತ್ತದೆಂದು ನಾ ಕೈ ಎತ್ತಿ ಹೇಳುತ್ತೇನೆ. ದೂರದ ತಾಳಿಕೋಟೆಯಲ್ಲಿ ನಮ್ಮ ಗೌಡರು ಬದುಕಿನ ಬಂಡಿ ಸಾಗಿಸಲು, ದುಡಿಯಲು ತಿಂಗಳುಗಟ್ಟಲೆ ಹೋದರೆ ಇಲ್ಲಿ ಎಳೆಯ ಒಂದು ಮಗುವನ್ನು, ನನ್ನ ಅತ್ತೆಯನ್ನು ಸಂಭಾಳಿಸುತ್ತ, ಮನೆ ವ್ಯವಹಾರಗಳಿಗೆ, ಸಂಸಾರದ ಖರ್ಚಿಗೆ ಬೇಕಾಗುವ ಹಣಕ್ಕಾಗಿ ನಾವು ಸಾಕಿದ ಎಮ್ಮೆಯ ಹಾಲನ್ನು ಕರೆದು ಅದನ್ನು ಮಾರಿಬಂದು ಮನೆಯಲ್ಲಿರುವ ಅತ್ತೆಗೆ ಊಟಕ್ಕೆ ಹಾಕಿ ನಸುಕಿನಲ್ಲಿ ಎದ್ದು ತಾಳಿಕೋಟೆಯಲ್ಲಿರುವ ಮಗ ಮತ್ತು ನಮ್ಮ ಗೌಡರಿಗೆ ಬುತ್ತಿ ಇಡುತ್ತಿದ್ದೆ. ಅನೇಕ ರೀತಿಯ ಕಷ್ಟಗಳು ಬಂದೊದಗಿದ್ದರೂ ತಾಳಿಕೋಟೆಯಲ್ಲಿರುವ ಗೌಡರಿಗೆ ಸ್ವಲ್ಪವೂ ತೊಂದರೆ ಕೊಡದೆ ಎಲ್ಲ ಕೆಲಸಗಳನ್ನು ನಾನೇ ಮಾಡಿ ಮುಗಿಸಿ ಅವರ ಪ್ರಾಮಾಣಿಕ ದುಡಿಮೆಗೆ ತೊಂದರೆ ಕೊಡದೆ ಎಲ್ಲ ಕೆಲಸಗಳನ್ನು ನಾನೆ ಮಾಡಿ ಮುಗಿಸಿ ಅವರ ಪ್ರಾಮಾಣಿಕ ದುಡಿಮೆಗೆ ತೊಂದರೆ ಕೊಡದೆ ನಾ ಬದುಕಿದೆ. ಬೆಳೆವ ಮಕ್ಕಳ ಬದುಕಿಗೆ `ನಾ ಓದದಿದ್ದರೂ ಮಕ್ಕಳು ಓದಲಿ' ಎಂದು ನೋವು ನುಂಗಿ ಬದುಕಿದ ನನಗೆ ಊರಿನ ಜನ ಸಾಕಷ್ಟು ಸಹಕರಿಸಿದರು. ಅದನ್ನು ನಾ ಒಂದೂ ಮರೆಯದಂತೆ ನನಗೆ ಮಾಡಿದ ಉಪಕಾರಕ್ಕೆ ನಾನು ಎಂದಿಗೂ ಕೃತಜ್ಞತೆ ಹೇಳಿ ನನ್ನ ಕೈಲಾದ ಮಟ್ಟಿಗೆ ಸಹಾಯ ಮಾಡಿ ಮುಕ್ತಳಾಗಿದ್ದೇನೆ.


ಊರ ಜನರು ನೀಲಮ್ಮರಿಗೆ ನಿಂದೆ ಮಾತನಾಡಿದರೂ ಮರು ಮಾತನಾಡದೆ ಅರ್ಥೈಸಿಕೊಂಡಿದ್ದು:

     ಅಕ್ಕನ ವಚನದ ಅರ್ಥ ಇವರಿಗೆ ತಿಳಿಯದಿದ್ದರೂ ಅದರಂತೆ ನಡೆದುಕೊಂಡದ್ದೆ ಶ್ರೇಷ್ಠವಾದದ್ದು. ತಾಯಿ ನೀಲಮ್ಮ ಇರುವ ಒಂದು ಸೀರೆಯನ್ನು ಒಂದು ಕಡೆಗೆ ತೊಟ್ಟು, ಇನ್ನೊಂದು ಕಡೆ ತೊಳೆದು ಒಣಗಿಸಿ ಪೂರ್ತಿ ಸೀರೆ ಒಣಗುವವರೆಗೆ ನಿಂತು ಒಣಗಿದ ಮೇಲೆ ತೊಟ್ಟು ಬರುವುದನ್ನು ನೋಡಿ `ನೀಲಮ್ಮ ನಿಜಕ್ಕೂ ನೀಲಮ್ಮನೆ. ಎಷ್ಟು ಕಷ್ಟ ಇದ್ದರೂ ಪುರಸುತ್ತ ಇಲ್ಲದೆ ದುಡಿತಾಳ. ಆಕೆ ಗಂಡನು ಬಸವಣ್ಣನಂತೆ ಯಾರಿಗೂ ಕೆಟ್ಟ ಮಾಡಲಾರದಾವನ ಅದಾನ, ಇವರು ಪಡುವ ತೊಂದರೆ ಅವರ ಮಕ್ಕಳಿಂದ ನೀಗಿದರ ಚಲೋ (ಒಳ್ಳೆಯದು) ಆಗತ್ತ' ಎಂದು ಅನುಕಂಪ ವ್ಯಕ್ತಪಡಿಸುವ ಜನರು ಇದ್ದರು.

ಬೆಳೆವ ಮಕ್ಕಳಿಗೆ, ಇಂದಿನ ಯುವಕರಿಗೆ ಮಡಿವಾಳಪ್ಪಗೌಡರ ಸಂದೇಶ:-

     ತುಂಬಾ ಕೆಳಗಿನಿಂದ ಅತಿ ಎತ್ತರಕ್ಕೆ ಏರಿದ ನಿಮ್ಮ ಮಕ್ಕಳ ಬದುಕಿಗೆ ಮತ್ತು ಪ್ರಾಮಾಣಿಕ ಜೀವನ ನಡೆಸುವ ಯುವಕರಿಗೆ ಏನು ಸಂದೇಶವೆಂದರೆ,
 * ಬದುಕಿನಲ್ಲಿ ನೋವುಗಳನ್ನು ಉಂಡು ಅವುಗಳನ್ನು ಗೆದ್ದು ಮತ್ತೊಬ್ಬರಿಗೆ ಒಳ್ಳೆಯದನ್ನು ಮಾಡಲು ಆಗದಿದ್ದರೂ ಕೆಟ್ಟದ್ದನ್ನು ಮಾಡುವುದು ಬೇಡ.

* ನಮ್ಮ ಕಷ್ಟದಲ್ಲಿ ಆದವರನ್ನು ಮರೆಯದೆ,  ಅವರನ್ನು ನೆನೆದು ಅವರು ತೊಂದರೆಯಲ್ಲಿರುವಾಗ ಉಪಕಾರವನ್ನರಿತು ಸಹಾಯ ಮಾಡುವುದು.

* ಜೀವನದಲ್ಲಿ ಎಷ್ಟೇ ಎತ್ತರಕ್ಕೆ ಬಂದರೂ, ಜೀವನದ ಹಿಂದಿನ ಸ್ಥಿತಿಯನ್ನು ಅರಿತು ನಡೆಯಬೇಕು.

* ಹೆತ್ತ ತಂದೆ-ತಾಯಿಗಳ ಕಷ್ಟ, ನೋವುಗಳನ್ನು ಅರಿತು ಅವರ ಜೊತೆಗಿದ್ದು ಹೆತ್ತು ಬೆಳೆಸಿದ ಋಣ ತೀರಿಸಬೇಕೆಂಬ ಪ್ರಾಮಾಣಿಕ ಮಾತನ್ನು ನೆನಪಿಟ್ಟು ಬದುಕುವುದು.

* ನಮ್ಮಲ್ಲಿ ಇದ್ದದ್ದರಲ್ಲಿ ನಿಸ್ಸಹಾಯಕರಿಗೆ ಸ್ವಲ್ಪ ನೀಡಿ ಬದುಕುವುದನ್ನು ಕಲಿತರೆ ಇಂದಿನ ದಿನಮಾನಗಳಲ್ಲಿಯೂ ಶ್ರೇಷ್ಠ ವ್ಯಕ್ತಿಗಳಾಗಿ ನೂರಾರು ಜನರ ಅಭಿಮಾನದ ಪೂಜನೀಯರಾಗಿ ಬದುಕುವರು.


ಮಡಿವಾಳಪ್ಪ ಗೌಡರು ಮತ್ತು ಮಡದಿ ನೀಲಮ್ಮ ಮಗನ ಇಂದಿನ ಉತ್ತಮ ಬದುಕನ್ನು ಕಂಡು ಹೇಳಿದ್ದು : 
* ನೋಡ್ರಿ ನಮ್ಮ ಮಗ ನಮ್ಮ ಶ್ರಮದ ಬದುಕನ್ನು ಕಂಡು ಈಗ ತಾನು ಅಪಾರ ಸಂಪತ್ತನ್ನು ಸಂಪಾದಿಸಿದ್ದರೂ ಸಾಮಾನ್ಯ ಮನುಷ್ಯನಾಗಿಯೆ ಬದುಕುತ್ತಿದ್ದಾನೆ.

* ತಾನು ಪ್ರಾರಂಭಿಸಿದ ಚಾಣಕ್ಯ ಕರಿಯರ್ ಅಕಾಡೆಮಿಯ ಮೊದಲನೆಯ ಸಂಪಾದನೆಯ ನಾಲ್ಕು ಲಕ್ಷ ರೂಪಾಯಿಗಳನ್ನು ತಾಯಿಯ ಹೆಸರಲ್ಲಿ ಇಟ್ಟಿದ್ದು.

* ತಂದೆಯ ಹಿರಿಯ ಆಸೆ "ನಾನು ನನ್ನದೇ ಜಮೀನನ್ನು ಮಾಡಿ ಅದರಲ್ಲಿ ಫಲ ಪಡೆಯಬೇಕು" ಎಂಬ ಆಸೆಗೆ, ಹಿರಿಯರ 9 ಎಕರೆ ಆಸ್ತಿಯನ್ನು ಯಾವ ತೊಂದರೆ ಬಂದರೂ ತಾಯಿಗೆ ಕೊಟ್ಟ ಮಾತಿನಂತೆ ಅಳಿಯದೆ ಉಳಿಸಿಕೊಂಡು ಬಂದ ಪ್ರಾಮಾಣಿಕ ಮಗ ಮಡಿವಾಳಪ್ಪಗೌಡರಾದರೆ, ತಂದೆಯ ಸ್ವಂತ ಜಮೀನಿಗಾಗಿ 15 ಲಕ್ಷ ನೀಡಿ 27 ಎಕರೆ ಜಮೀನು ಕೊಡಿಸಿದ ಪ್ರಾಮಾಣಿಕ ಮಗ ನಿಂಗನಗೌಡ.

* ನಮಗೆ ತೊಂದರೆ ಬಂದಾಗ ಒಣಬೇಸಾಯದ 9 ಎಕರೆ ಹೊಲವನ್ನು ಬಡ್ಡಿಯಲ್ಲಿ ಹಾಕಿಕೊಂಡು ಹಣ ಸಹಾಯ ನೀಡಿದ ಊರಿನ ನಮ್ಮ ಹಿತೈಷಿಗೆ ತೊಂದರೆ ಬಂದಾಗ 50,000 ರೂ. ನೀಡಿ ಆತನ ಮಗಳ ಮದುವೆ ಮಾಡಿಸಿದಂತಾ ನಮ್ಮ ಪುತ್ರ ನಿಂಗನಗೌಡ ಇನ್ನೂ ಬೆಳೆಯಲಿ. ನೂರಾರು ನಿಸ್ಸಹಾಯಕ ಯುವಕರಿಗೆ ಶಕ್ತಿಯಾಗಿ ಬದುಕಿ ಕೀರ್ತಿ ಸ್ಥಾಪಿಸಲಿ.

* ಆದರೆ ತಾಯಿ, "ಇಷ್ಟೆಲ್ಲಾ ಸಂಪತ್ತು, ಸಂತೋಷ ದೇವರು ಕೊಟ್ಟಾನ. ಅದನ್ನೆಲ್ಲ ನೀಗಿಸುವ ಶಕ್ತಿ ನಮ್ಮ ಮಗ ಪಡೆದರೂ ನನಗೆ ಮೊದಲಿನ ಜೀವನಾನೇ ಚೆನ್ನಾಗಿತ್ತು. ಯಾಕೆಂದರೆ ಇಷ್ಟೆಲ್ಲಾ ಸಂಪತ್ತು ಕೀರ್ತಿ ಗಳಿಸಿ, ನೂರಾರು ಜನರ ಬಾಳಿಗೆ ಬೆಳಕಾಗಿ ಬೆಳೆದಿದ್ದರು ಊಟ ಉಡಲಿಕ್ಕೆ, ಬೇಕು ಬೇಕಾದ್ದು ಇದ್ದರೂ ಒಂದು ಕ್ಷಣವು ಎಡೆಬಿಡದೆ ದುಡಿಯುತ್ತಿರುವ ನನ್ನ ಮಗ ಒಂದು ಹೊತ್ತಾದರೂ ಸಂತಸದಿಂದ ಕುಳಿತು ಊಟ ಮಾಡದೆ ದುಡಿಯುವುದು ನಮಗೇನು ಸಂತಸ ತಂದುಕೊಟ್ಟೀತು" ಎನ್ನುವ ಮಾತಿನಲ್ಲೆ ಮೊದಲೆ ಸಂತಸದಿಂದ ಇದ್ದೆವು ಎಂದು ಒಂದು ಸಂದರ್ಭವನ್ನು ಈ ರೀತಿ ತಿಳಿಸಿದರು. -

        ನಾಗರಪಂಚಮಿಗೆಂದು ಮಗ, ಸೊಸೆ, ಮೊಮ್ಮಕ್ಕಳ ಹತ್ತಿರ ಹೋಗಿದ್ದೆ. ಅಲ್ಲಿ ನನ್ನ ಮಗನು ತರಬೇತಿಗೆ ಬಂದ ಚಾಣಕ್ಯ ಕರಿಯರ್ ಅಕಾಡೆಮಿಯ ವಿದ್ಯಾರ್ಥಿಗಳಿಗೆ ಒಂದು ಕ್ಷಣವೂ ವ್ಯರ್ಥ ಹೋಗದಂತೆ ವಿದ್ಯಾರ್ಥಿಗಳಿಗಾಗಿ ಶ್ರಮಿಸುವ ನನ್ನ ಮಗನ ಸೇವೆ ನನಗೆ ಹೆಮ್ಮೆ ತಂದರೂ, ಕಾಲಲ್ಲಿ ಹಾಕಿಕೊಳ್ಳುವ ಜೋಡು (ಚಪ್ಪಲಿ) ಕಳೆದರೂ ತೆಗೆದುಕೊಳ್ಳಲು ಸಾವಿರಾರು ರೂಪಾಯಿ ಬಿದ್ದಿದ್ದರೂ ಒಂದು ವಾರದವರೆಗೆ ಬರಿಗಾಲಲ್ಲೆ ತಿರುಗಾಡುವುದು, ಕ್ಲಾಸ್‍ಗೆ ಹೋಗುವುದನ್ನು ನೋಡಿದ ಈ ಹೆತ್ತ ಒಡಲು ಮರುಗಿ "ಈ ರೀತಿಯ ದುಡಿಮೆ ನನ್ನ ಮಗನಿಗೆ ಬೇಡ" ಎಂದು ಕೊನೆಗೆ ಸಂದೇಶ ನೀಡಿದರು.
       "ಏನೇ ಇರಲಿ, ಎಷ್ಟೇ ಇರಲಿ ಜೀವನಕ್ಕಿಂತಲೂ ದೊಡ್ಡದು ಯಾವುದು? ಇಲ್ಲಿ ಆರೋಗ್ಯ ನೆಮ್ಮದಿಯನ್ನು ಕಂಡುಕೊಂಡು ಖುಷಿ ಬಂದಾಗ ಹಿಗ್ಗದೆ, ಕಷ್ಟ ಬಂದಾಗ ಹೆದರದೆ ಬದುಕಬೇಕು" ಎಂದರು.

(ಕೃಪೆ: ಚಾಣಕ್ಯ ಕರಿಯರ್ ಅಕಾಡೆಮಿ ಪ್ರಕಾಶನದ `ಎರಡು ತಲೆಮಾರು' ಕೃತಿ. ಸಂಗ್ರಹ ಸಂಪಾದಕರು: ಅರವಿಂದ ಚೊಕ್ಕಾಡಿ)
                           **************************************



                                        ಆತ್ಮೀಯರೆ, ಇಷ್ಟೆಲ್ಲಾ ಏಕೆ ಹೇಳಬೇಕಾಯಿತೆಂದರೆ, ನಾವು ಮನಸ್ಸು ಮಾಡಿದರೆ ಏನನ್ನು ಬೇಕಾದರೂ ಸಾಧಿಸಬಹುದು. ಅಸಾಧ್ಯವೆಂಬುದು ಯಾವುದು ಇಲ್ಲ. ಸಾಧನಾ ಶೂನ್ಯಕ್ಕೆ ಬಡತನ ಎಂದಿಗೂ ಕಾರಣವಲ್ಲ ಎಂಬುದನ್ನು ತಿಳಿಸಲಿಕ್ಕಾಗಿಯೇ ಈ ಲೇಖನವನ್ನು ಬೆರಳಚ್ಚಿಸಿ ಪ್ರಕಟಿಸಬೇಕಾಯಿತು.

                                                         ಇನ್ನು ತಮ್ಮ ಪ್ರತಿಕ್ರಿಯೆಯ ನಿರೀಕ್ಷೆಯಲ್ಲಿ.... 

No comments:

Post a Comment